ANKOLA|ಹಾಡುಹಕ್ಕಿ ಪದ್ಮಶ್ರೀ‌ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ನಿಧನ

Spread the love

ಅಂಕೋಲಾ: ಹಾಡುಹಕ್ಕಿ ಜನಪದ ಕೋಗಿಲೆ ಎಂದೇ ಹೆಸರಾಗಿದ್ದ ತಾಲೂಕಿನ ಬಡಗೇರಿ ಮೂಲದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ  ಅನಾರೋಗ್ಯ ಹಿನ್ನಲೆಯಲ್ಲಿ ನಿಧನ ಹೊಂದಿದ್ದಾರೆ.

ಹೌದು… ತನ್ನ ಸೊಗಸಾದ ಕಂಠದ ಮೂಲಕ ಜಾನಪದ ಹಾಡುಗಳ ಮೂಲಕ ಗಮನ ಸೆಳೆದಿದ್ದ ತಾಲೂಕಿನ ಬಡಗೇರಿ ಮೂಲದ ಸುಕ್ರಿ ಬೊಮ್ಮ ಗೌಡ ಅನಾರೋಗ್ಯದ ನಿಮಿತ್ತ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.

88 ವರ್ಷ ವಯಸ್ಸಿನ ಸುಕ್ರಿ ಬೊಮ್ಮ ಗೌಡರಿಗೆ ಹಲವು ದಿನಗಳಿಂದ ಅನಾರೋಗ್ಯ ಹಿನ್ನಲೆಯಲ್ಲಿ ಹಲವು ಬಾರಿ‌ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು.ಚಿಕಿತ್ಸೆಗೆ ಸ್ಪಂದಿಸದ ಸುಕ್ರಿ ಗೌಡ ಇಂದು ಅಸುನೀಗಿದ್ದಾರೆ.

ಜನಪದ ಹಾಡುಗಳ ಮೂಲಕ ಜನಪದ ಕೋಗಿಲೆ ಎಂದೇ ಪ್ರಸಿದ್ದರಾಗಿದ್ದ ಸುಕ್ರಿ ಗೌಡರಿಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿದ್ದರು. ಅವುಗಳಲ್ಲಿ ದೇಶದ ಅತ್ಯುನ್ನತ ಗೌರವ ಪದ್ಮಶ್ರೀ ಕೂಡ ಒಂದು 2017 ರಲ್ಲಿ ಕೇಂದ್ರ ಸರಕಾರ ಸುಕ್ರಜ್ಜಿಯವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು, ಹಾಗೆಯೇ  ನಾಡೋಜ, ರಾಜ್ಯೋತ್ಸವ, ಜಾನಪದ ಶ್ರೀ ಪ್ರಶಸ್ತಿಯು ಕೂಡ ಸುಕ್ರಜ್ಜಿಯ ಮುಡಿಗೇರಿತ್ತು.

ಜಾನಪದ‌ ಹಾಡುಗಳ ಮೂಲಕ ಸಮುದಾಯದ ಮಹಿಳೆಯ ಪರಿಚಯಿಸುವ ಕಾರ್ಯ ನಿರ್ವಹಿಸಿದ್ದ ಸುಕ್ರಜ್ಜಿ,ಅನೇಕ ಹೋರಾಟಗಳ ಮೂಲಕವೂ ಮುಂಚೂಣಿ ಯಲ್ಲಿ ಇರುತ್ತಿದ್ದರು ಅಂದಿನ ಸಿಪಿಐ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಧರ್ ಎಸ್ ಆರ್ ಅವರೊಂದಿಗೆ ತಾಲೂಕಿನಲ್ಲಿ  ಕಳ್ಳಭಟ್ಟಿ ಸಾರಾಯಿ ಸಂಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ಅವರೊಂದಿಗೆ ಕೈಜೋಡಿಸಿ ಆಂದೋಲನವನ್ನೇ ಸೃಷ್ಟಿಸಿದ್ದರು.

ಪ್ರಧಾನಿ ನರೇಂದ್ರಮೋದಿ ಸಹಿತ ಹಲವಾರು ಗಣ್ಯರು ಕಂಬನಿ ಮಿಡಿದಿದ್ದು,ಸ್ವಗ್ರಾಮ ಬಡಗೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *