ಅಂಕೋಲಾ: ಯೋಜನೆಗಳ ಹೆಸರಿನಲ್ಲಿ ಜನರನ್ನು ನಿರಾಶ್ರಿತರನ್ನಾಗಿ ಮಾಡುವುದು ಸರಿಯಲ್ಲ ಎಂದು ಶ್ರೀರಾಮ್ ಪರಿಸರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ವಸಂತ ನಾಯಕ ಜಮಗೊಡ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಅಂಕೋಲಾ ಕಾರವಾರ ಕ್ಷೇತ್ರದಲ್ಲಿ ರೂಪುಗೊಂಡ ಹಲವು ಯೋಜನೆಗಳ ನಿರಾಶ್ರಿತರ ಬಗ್ಗೆ ಅಧ್ಯಯನ ನಡೆಸಿ ಮಾತನಾಡಿ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಅತೀ ದೊಡ್ಡ ಪ್ರಜಾಪ್ರಭುತ್ವಹೊಂದಿರುವ ನಮ್ಮ ದೇಶದಲ್ಲಿ ಯೋಜನೆಗಳ ಹೆಸರಿನಲ್ಲಿ ಕೆಲವರು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗುತ್ತಿದ್ದಾರೆ, ಇನ್ನು ಕೆಲವರು ತಲತಲಾಂತರದಿಂದ ಬಂದ ಉದ್ಯೋಗಗಳನ್ನು ಕಳೆದುಕೊಂಡು, ಬೇರೆ ಉದ್ಯೋಗಕ್ಕೆ ಒಗ್ಗದೆ ತಮ್ಮ ಬದುಕನ್ನು ಹಾಳುಗೆಡವಿಕೊಂಡಿದ್ದಾರೆ.ಕೃಷಿಯನ್ನು ನಂಬಿ ಬಂದವರು ತಮ್ಮ ಭೂಮಿಯನ್ನು ದೇಶದ ರಕ್ಷಣೆಗೆ,ಅಭಿವೃದ್ಧಿಗೆ ಧಾರೆಯೆರೆದು ಕತ್ತಲಲ್ಲಿ ಬದುಕುಸಾಗಿಸುತ್ತಿದ್ದಾರೆ.ಕೈಗಾ ಅನುಸ್ಥಾವರ ಹಾಗೂ,ನೌಕಾನೆಲೆ, ಸಿಬರ್ಡ್ ಇವೆಲ್ಲ ಯೋಜನೆಗಳ ಪೂರ್ಣಪ್ರಮಾಣದ ಪರಿಹಾರ ಸಿಗದೆ ಜನಸಾಮಾನ್ಯರು ಸೋತುಹೋಗಿದ್ದಾರೆ,ಇವೆಲ್ಲದರ ಮದ್ಯೆ ಮತ್ತೆ ಕೇಣಿಯಲ್ಲಿ ಗ್ರೀನ್ ಫೀಲ್ಡ್ ವಾಣಿಜ್ಯ ಬಂದರು ನಿರ್ಮಿಸಲು ಹೊರಟಿದ್ದು ಸರಿಯಲ್ಲ.

ಸಮುದ್ರವನ್ನೇ ನಂಬಿ ಮೀನುಗಾರರು ಹೊಟ್ಟೆಪಾಡಿಗಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ ಅದು ಬಿಟ್ಟರೆ ಅವರಿಗೆ ಮತ್ಯಾವ ಉದ್ಯೋಗವು ಸರಿದುಗುವುದಿಲ್ಲ,ಕೃಷಿ ಚಟುವಟಿಕೆ ನಡೆಸಲು ಅವರಿಗೆ ತಕ್ಕಮಟ್ಟಿಗೆ ಭೂಮಿ ಸಹ ಇಲ್ಲ ಆದ್ದರಿಂದ ಸಮುದ್ರದ ದಡದಲ್ಲಿ ದೊಡ್ಡ ದೊಡ್ಡ ಬಂದರು ನಿರ್ಮಾಣವಾದರೆ ಸಾಂಪ್ರದಾಯಿಕ ಮೀನುಗಾರಿಕೆಗೆ ದೊಡ್ಡ ಪ್ರಮಾಣದ ಹೊಡೆತಬೀಳಲಿದ್ದು,ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಮೀನುಗಾರರ ಕುಟುಂಬ ಸರ್ವನಾಶವಾಗಲಿದೆ.ಅವರಿಗೆ ಬದಲಿ ವ್ಯವಸ್ಥೆ ಅಥವಾ ಸೂಕ್ತ ಪರಿಹಾರ ಒದಗಿಸಿ ಯೋಜನೆಗಳನ್ನು ರೂಪುಗೊಳಿಸಬೇಕು.

ಯೋಜನೆಗಳನ್ನು ಯಾರು ವಿರೋಧಿಸುವುದಿಲ್ಲ ಆದರೆ ಯೋಜನೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗದೆ ಇದ್ದರೆ ಯಾವುದೇ ಪ್ರಶ್ನೆಯೇ ಬರುವುದಿಲ್ಲ, ಅಭಿವೃದ್ದಿಶೀಲ ರಾಷ್ಟ್ರಗಳಿಗೆ ದೇಶದ ರಕ್ಷಣೆ,ಆರ್ಥಿಕಾಭಿವೃದ್ಧಿಗೆ ಇಂತಹ ಯೋಜನೆಗಳು ಬಹು ಮುಖ್ಯ ಆದರೆ ಇಂತಹ ಯೋಜನೆಗಳಿಂದ ಜನರನ್ನು ಬಲಿಪಶು ಮಾಡುವುದು ಎಷ್ಟು ಸರಿ? ದೇಶದ ರಕ್ಷಣೆಗೆ ತಮ್ಮ ಭೂಮಿಯನ್ನೇ ನೀಡಿ ಅಂಕೋಲಾ-ಕಾರವಾರದ ಜನರು ದೇಶಪ್ರೇಮವನ್ನು ಮೆರೆದಿದ್ದಾರೆ,ಆದರೆ ಕೆಲವರು ಇಲ್ಲಿಯವರೆಗೂ ನಿರಾಶ್ರಿತರಾಗಿಯೇ ಉಳಿದಿದ್ದಾರೆ. ಪರಿಹಾರದ ಮೊತ್ತ ಸಾಲುತಿಲ್ಲ,ಬದಲಿ ಭೂಮಿ ದೊರೆಯಲಿಲ್ಲ ಎನ್ನುವುದು ಮತ್ತಷ್ಟು ನಿರಾಶ್ರಿತರ ಗೋಳಾಗಿದೆ.ಇಷ್ಟೆಲ್ಲ ಯೋಜನೆಗಳು ಬಂದರು ಸ್ಥಳೀಯ ಯುವಕರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವುದು ತಪ್ಪಲಿಲ್ಲ. ಆದ್ದರಿಂದ ಇಲ್ಲಿಯ ಯೋಜನೆಗಳಲ್ಲಿ ನಿರಾಶ್ರಿತರಾದವರಿಗೆ ರಾಷ್ಟ್ರೀಯ ಸಂತ್ರಸ್ತರೆಂದು ಪರಿಗಣಿಸಿ ಯೋಜನೆಯಲ್ಲಿ ನಿರಾಶ್ರಿತರಾದವರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅವರು ಬೇರೊಂದು ನೆಲೆಯಲ್ಲಿ ಸದೃಢವಾಗುವವರೆಗೆ ಸರಕಾರದಿಂದ ಆರ್ಥಿಕ ನೆರವುಗಳನ್ನು ನೀಡಿ ಪೋಷಿಸಿದರೆ ಮಾತ್ರ ನಿರಾಶ್ರಿತರು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ.

ಹಾಗೆಯೇ ಅಂದು ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಕೊಡಸಳ್ಳಿ ಆಣೆಕಟ್ಟು ನಿರ್ಮಾಣದಿಂದ ಅಲ್ಲಿಯ ಸ್ಥಳೀಯರು ನಿರಾಶ್ರಿತರಾಗಿದ್ದರು.ಅವರಿಗೆ ಅಂಕೋಲಾ ತಾಲೂಕಿನ ಹೆಗ್ಗಾರ,ಹಳವಳ್ಳಿ ಮತ್ತು ಕಲ್ಲೇಶ್ವರದಲ್ಲಿ ಪುನರ್ವಸತಿ ಕೇಂದ್ರಗಳನ್ನು ಕಲ್ಪಿಸಲಾಗಿತ್ತು, ಇಂದು ಅವರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.ಅಡಿಕೆ ತೆಂಗು ಹೀಗೆ ಕೃಷಿ ಆಧರಿಸಿ ಸುಸ್ಥಿರ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಂತಹ ಪರಿಹಾರ ಸೌಲಭ್ಯಗಳನ್ನು ನೀಡಿದರೆ ನಿರಾಶ್ರಿತರು ಬದುಕು ಹಸಿನಾಗುವುದರಲ್ಲಿ ಸಂಶಯವಿಲ್ಲ ಹಾಗೆಯೇ ಯೋಜನೆಗಳು ಸಹ ಉತ್ತಮವಾಗಿ ರೂಪುಗೊಂಡು ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಸರಕಾರಕ್ಕೆ ಮನವಿ ಮಾಡಿದರು.


Leave a Reply