ಅಂಕೋಲಾ:ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಐ ಆರ್ ಬಿ ಕಂಪನಿಯ ಎಂಟು ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ನ್ಯಾಯಾಲಯದ ಆದೇಶ ಹೊರಡಿಸಿ 24 ದಿನ ಕಳೆದರು ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ಕೊಡದ ಪೊಲೀಸ ಅಧಿಕಾರಿಗಳ ವಿರುದ್ಧ ಬ್ರಹ್ಮರ್ಷಿ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿಗಳಾದ ಹಾಗೂ ಈಡಿಗ ಸಮುದಾಯದ ಸ್ವಾಮೀಜಿ ಪ್ರಣವಾನಂದ ಸ್ವಾಮೀಜಿಯವರು ಆಕ್ರೋಶ ವ್ಯಕ್ತಪಡಿಸಿದರು.

ಹೌದು….ಐ ಆರ್ ಬಿ ಕಂಪನಿಯ ಎಂಟು ಅಧಿಕಾರಿಗಳ ಮೇಲೆ ಎಫ್ ಐ ಆರ್ ದಾಖಲಿಸುವಂತೆ ಜೆ ಎಂ ಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು, ಆದೇಶ ಹೊರಡಿಸಿ 24 ದಿನ ಕಳೆದರು ಕ್ರಮ ಕೈಗೊಳ್ಳದ ಪೊಲೀಸ ಅಧಿಕಾರಿಗಳ ನಡೆಯನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರೆತಿಲ್ಲ, ಅವೈಜ್ಞಾನಿಕ ಕಾಮಗಾರಿ ಕೈಗೊಂಡು ಗುಡ್ಡ ಕುಸಿತಕ್ಕೆ ಕಾರಣವಾಗಿದ್ದ ಐ ಆರ್ ಬಿ ಕಂಪನಿಯವರು ನಿರಾತಂಕವಾಗಿ ಇದ್ದಾರೆ,ಅಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಮೆಟ್ಟಿಲೇರಿದರು ಅವರು ಸ್ಪಂದಿಸಿಲ್ಲ,ಆದ್ದರಿಂದ ನ್ಯಾಯಾಲಯದ ಮೊರೆ ಹೋದೆವು ಅಲ್ಲಿ ಐ ಆರ್ ಬಿ ಕಂಪನಿಯ ಎಂಟು ಅಧಿಕಾರಿಗಳ ಮೇಲೆ ಎಫ್ ಐ ಆರ್ ದಾಖಲಿಸುವಂತೆ ಆದೇಶ ನೀಡಿದ್ದರು ಸಹ ಯಾವುದೇ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ,ಇದಕ್ಕೆ ಸ್ವತಃ ಬಂದು ವಿಚಾರಿಸಿದಾಗ ನ್ಯಾಯಾಲಯ ನಮಗೆ ಮತ್ತೊಮ್ಮೆ ಜ್ಞಾಪಿಸಬೇಕು ಎಂದು ಉಡಾಫೆ ಉತ್ತರ ನೀಡುತ್ತಾರೆ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ನಿರ್ಲಕ್ಷ್ಯತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವಾಗಬೇಕು.

ಹಿಂದುಳಿದ ವರ್ಗದ ಮುಖ್ಯಮಂತ್ರಿ ಎನಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಹಾಗೂ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂದು ಕಿರುಚಾಡುವ ಗೃಹಮಂತ್ರಿ ಜಿ. ಪರಮೇಶ್ವರ ಅವರೇ ಯಾಕೆ ಸುಮ್ಮನಿದ್ದೀರಿ ನಿಮ್ಮಿಂದ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಅಸಾಧ್ಯವೇ ಎಂದು ಗುಡುಗಿದರು.
ಶಿರೂರು ಗುಡ್ಡ ಕುಸಿತಕ್ಕೆ ಐ ಆರ್ ಬಿ ಕಂಪನಿಯ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣ ಎಂದು ಬ್ರಹ್ಮರ್ಷಿ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿಗಳಾದ ಹಾಗೂ ಈಡಿಗ ಸಮುದಾಯದ ಸ್ವಾಮೀಜಿ ಪ್ರಣವಾನಂದ ಸ್ವಾಮೀಜಿಯವರು ವಿರೋಧ ವ್ಯಕ್ತಪಡಿಸಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಪೊಲೀಸರು ಪ್ರಕರಣ ದಾಖಲಿಸದ ಕಾರಣ ಸ್ವಾಮೀಜಿ ನ್ಯಾಯಾಲಯದ ಮೊರೆ ಹೋಗಿದ್ದರು, ಸ್ವಾಮೀಜಿಯವರ ದೂರನ್ನು ಪುರಸ್ಕರಿಸಿದ ಜೆ ಎಂ ಎಫ್ ಸಿ ನ್ಯಾಯಾಲಯ ಕಂಪನಿಯ ಎಂಟು ಜನರ ಮೇಲೆ ಎಫ್ ಐ ಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿತ್ತು ಆದರೂ ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ಕೊಡದ ಪೊಲೀಸ್ ಅಧಿಕಾರಿಗಳ ವಿರುದ್ಧ ಹಾರಿಹಾಯ್ದರು.

ಏನಿದು ಪ್ರಕರಣ?
ಜಿಲ್ಲೆಗೆ ಜುಲೈ 16 ಕರಾಳ ಮಂಗಳವಾರವಾಗಿದ್ದು ಜಿಲ್ಲೆ ಕಂಡರಿಯದ ಘನಘೋರ ದುರಂತವೊಂದು ಸಂಭವಿಸಿತ್ತು, ರಾಷ್ಟ್ರೀಯ ಹೆದ್ದಾರಿ 66 ರ ಶಿರೂರು ಬಳಿ ಭೀಕರ ಗುಡ್ಡ ಕುಸಿತ ಸಂಭವಿಸಿ 11 ಮಂದಿ ಪ್ರಾಣಕಳೆದುಕೊಂಡಿದ್ದರು, ಗುಡ್ಡ ಕುಸಿತದಲ್ಲಿ ನಾಪತ್ತೆಯಾದ 11 ಮಂದಿಯ ಪೈಕಿ ಏಳು ಮಂದಿಯ ಮೃತದೇಹಗಳು ಗಂಗಾವಳಿ ನದಿಯ ಸಂಗಮ ಪ್ರದೇಶದಲ್ಲಿ ಪತ್ತೆಯಾಗಿತ್ತು,ಮತ್ತೊರ್ವರ ಶವ ಬೆಳಂಬಾರದ ಕಡಲತೀರದಲ್ಲಿ ಕಂಡುಬಂದಿತ್ತು. ಸ್ಥಳೀಯರಾದ ಜಗನ್ನಾಥ ನಾಯ್ಕ,ಲೋಕೇಶ ನಾಯ್ಕ ಹಾಗೂ ಕೇರಳ ಮೂಲದ ಅರ್ಜುನ್ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿರಂತರ ಕಾರ್ಯಾಚರಣೆಗೆ ಮುಂದಾಗಿತ್ತು, ನೀರಿನ ಹರಿತ ಕಡಿಮೆಯಾದಂತೆ ಸಪ್ಟೆಂಬರ್ 19 ರಂದು ಪುನಃ ಕಾರ್ಯಾಚರಣೆ ಆರಂಭಿಸಿದ ಜಿಲ್ಲಾಡಳಿತ ಬಾರ್ಜ್ ಸಹಿತ ಡ್ರಜ್ಜಿಂಗ್ ಯಂತ್ರಗಳ ಸಹಾಯದಿಂದ ನದಿಯೊಳಗೆ ರಾಶಿ ರಾಶಿಯಾಗಿ ಬಿದ್ದಿರುವ ಮಣ್ಣನ್ನ ತೆರವುಗೊಳಿಸುವ ಕಾರ್ಯಾಚರಣೆಗೆ ಇಳಿದಿತ್ತು.ಕಾರ್ಯಾಚರಣೆ ಪ್ರಾರಂಭದಿಂದಲೂ ಅವಶೇಷಗಳ ರಾಶಿಯೇ ಪತ್ತೆಯಾಗಿತ್ತು, ಗ್ಯಾಸ್ ಟ್ಯಾಂಕರ್ ಬಿಡಿಬಾಗಗಳು ದೊರೆಯುತ್ತಿದ್ದಂತೆ ಕಾರ್ಯಾಚರಣೆ ಮತ್ತಷ್ಟು ತೀವೃ ಸ್ವರೂಪ ಪಡೆಯಿತು ಸತತ ನಾಲ್ಕು ದಿನ ನಡೆದ ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ಕುರುಹುಗಳು ದೊರೆತಿರಲಿಲ್ಲ,ಐದನೇ ದಿನದ ಕಾರ್ಯಾಚರಣೆಯಲ್ಲಿ ಲಾರಿಯ ಬಿಡಿಬಾಗ ದೊರೆತಿದ್ದು,ಅದು ನಮ್ಮ ಲಾರಿಯ ಬಾಗವೇ ಎಂದು ಲಾರಿ ಮಾಲಕ ಮೊಬಿನ್ ದೃಢಪಡಿಸಿದ್ದರು ಆರನೇ ದಿನ ಲಾರಿಯ ಬಿಡಿಬಾಗ ದೊರೆತ ಸ್ಥಳದಲ್ಲಿಯೇ ಶೋಧ ಕಾರ್ಯ ಮುಂದುವರೆಸಿದ್ದರು.ಮಧ್ಯಾಹ್ನ ಭಾರತ್ ಬೆಂಜ್ ಲಾರಿ ನದಿಯಾಳದಲ್ಲಿ ಮಣ್ಣಿನಿಂದ ಎರಡು ಮೀಟರ್ ನಷ್ಟು ಹುದುಗಿಕೊಂಡಿರುವ ರೀತಿಯಲ್ಲಿ ಪತ್ತೆಯಾಗಿತ್ತು,ಡ್ರೆಜ್ಜಿಂಗ್ ಮಶಿನ್ ಮಣ್ಣನ್ನು ತೆರವುಗೊಳಿಸಿ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲಕೆತ್ತಿದ್ದು,ಲಾರಿಯೊಳಗೆ, ಲಾರಿ ಚಾಲಕ ಅರ್ಜುನ್ ನ ಮೃತದೇಹದ ಕಳೆಬರಹವು ಪತ್ತೆಯಾಗಿತ್ತು. ಇದರಿಂದ ನಾಪತ್ತೆಯಾಗಿದ್ದ ಇನ್ನಿಬ್ಬರ ಮೃತದೇಹ ದೊರೆಯುವ ವಿಶ್ವಾಸ ಎದುರಾಗಿತ್ತು.ಅದರಂತೆಯೇ ಕಾರ್ಯಾಚರಣೆಯ ವೇಳೆ ಮತ್ತೆರಡು ಮೂಳೆಗಳು ಪತ್ತೆಯಾಗಿದ್ದು ಅದು ಯಾರ ಮೂಳೆಗಳು ಎನ್ನುವುದು ಮಾತ್ರ ಡಿ ಎನ್ ಎ ಪರೀಕ್ಷೆಯ ಬಳಿಕ ತಿಳಿದು ಬರಬೇಕಿತ್ತು, ವೈದ್ಯಕೀಯ ಎಡವಟ್ಟಿಗೆ ಇಲ್ಲಿಯವರೆಗೆ ಡಿ ಎನ್ ಎ ವರದಿ ವಿಳಂಬವಾಗಿದ್ದು ನಾಪತ್ತೆಯಾದವರ ಕುಟುಂಬಸ್ಥರು ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ.
ಈ ಕುರಿತು ಸಂತಸ ವ್ಯಕ್ತಪಡಿಸಿದ ಸ್ವಾಮೀಜಿ ನ್ಯಾಯಾಲಯದ ಅದೇಶದಿಂದ ಗುಡ್ಡ ಕುಸಿತ ಪ್ರಕರಣದಲ್ಲಿ ನೋಂದವರಿಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ. ಶಿರೂರು ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದವರಿಗೆ ನ್ಯಾಯ ಕೊಡಿಸೀಯೇ ತಿರುತ್ತೇನೆ ಎಂದರು.


Leave a Reply