ಅಂಕೋಲಾ: ತಾಲೂಕಿನ ನದಿಬಾಗ ಸಮುದ್ರ ತೀರದಲ್ಲಿ ಬಲೆಗೆ ಸಿಕ್ಕಿಕೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಕಡಲಾಮೆಯೊಂದನ್ನು ಸ್ಥಳೀಯ ಯುವಕರು ರಕ್ಷಿಸಿ ಸುರಕ್ಷಿತವಾಗಿ ಮತ್ತೆ ಸಮುದ್ರಕ್ಕೆ ಬಿಟ್ಟ ಘಟನೆ ನಡೆದಿದೆ.
ಬಲೆಗೆ ಸಿಲುಕಿ ಸಮುದ್ರ ತೀರಕ್ಕೆ ಬಂದಿದ್ದ ಆಮೆಯನ್ನು ಗಮನಿಸಿದ ಸ್ಥಳೀಯ ಯುವಕರಾದ ಅಕ್ಷಯ್ ಗೌಡ, ರೂಪೇಶ್ ನಾಯ್ಕ, ಗಜೇಂದ್ರ ನಾಯ್ಕ ಹಾಗೂ ಸಾಗರ ನಾಯ್ಕ ಅವರು ಕೂಡಲೇ ರಕ್ಷಣಾ ಕಾರ್ಯಾಚರಣೆಗಿಳಿದಿದ್ದಾರೆ. ಬಹಳ ಎಚ್ಚರಿಕೆಯಿಂದ ಆಮೆಗೆ ಯಾವುದೇ ಗಾಯವಾಗದಂತೆ ಬಲೆಯನ್ನು ಕತ್ತರಿಸಿ ತೆರವುಗೊಳಿಸಿದ್ದಾರೆ.
ಬಳಿಕ ಕಡಲಾಮೆಯನ್ನು ಸುರಕ್ಷಿತವಾಗಿ ಸಮುದ್ರದ ನೀರಿಗೆ ಬಿಟ್ಟಿದ್ದಾರೆ. ಯುವಕರ ಈ ಸಮಯೋಚಿತ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದು, ಸಮುದ್ರ ಜೀವಿಗಳ ಸಂರಕ್ಷಣೆಗೆ ಇಂತಹ ಮಾನವೀಯ ಕಾರ್ಯಗಳು ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
