ಅಂಕೋಲಾ: ಸತತ ಎರಡು ವರ್ಷಗಳಿಂದ ಅದ್ದೂರಿಯಿಂದ ಮಾವು ಮೇಳವನ್ನು ಆಯೋಜಿಸುವ ಮೂಲಕ ಅಂಕೋಲೆಯ ಮಾವು ಬೆಳೆಗಾರರಿಗೆ ಉತ್ತೇಜನ ನೀಡುತ್ತಾ ಬಂದಿರುವ ಬೆಳೆಗಾರರ ಸಮಿತಿ ವತಿಯಿಂದ ಮೂರನೇ ವರ್ಷದ ಮಾವು ಮೇಳ ಮೇ 24 ಮತ್ತು 25ರಂದು ಪಟ್ಟಣದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಬೆಳೆಗಾರರ ಸಮಿತಿ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.

ಅವರು ಪಟ್ಟಣದ ಖಾಸಗಿ ಹೊಟೇಲ್ ಒಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಮೇ 24 ಮುಂಜಾನೆ 8 ಗಂಟೆಗೆ ಮಾವು ಮೇಳ ಆರಂಭವಾಗಲಿದ್ದು,ಬಂಧನ, ಮುತ್ತಿನಹಾರ ಹೀಗೆ ಅನೇಕಾರು ಯಶಸ್ವಿ ಚಲನಚಿತ್ರಗಳನ್ನು ನೀಡಿರುವ ಖ್ಯಾತ ನಿರ್ದೇಶಕರಾದ ರಾಜೇಂದ್ರಸಿಂಗ್ ಬಾಬು ಮಾವು ಮೇಳಕ್ಕೆ ಚಾಲನೆ ನೀಡಲಿದ್ದಾರೆ, ಸ್ಥಳೀಯ ಶಾಸಕ ಸತೀಶ ಸೈಲ್, ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ, ಒಂದಡೆ ಮಾವು ಮಾರಾಟ ನಡೆಯುತ್ತಿದ್ದರೆ ಬೆಳಿಗ್ಗೆ 10 ಗಂಟೆಗೆ ಪತ್ರಕರ್ತ, ಪರಿಸರ ತಜ್ಞ ಶಿವಾನಂದ ಕಳವೆ ಅವರಿಂದ ಚಾಲ್ತಿ ಮಾವಿನ ಹಣ್ಣಿನ ಮರಗಳನ್ನು ಉಳಿಸುವ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ.

ಹಾಗೆಯೇ ಸಂಜೆ 4 ಗಂಟೆಗೆ ಸಾಹಿತಿ ಫಾಲ್ಗುಣ ಗೌಡ ಅವರ ಅಧ್ಯಕ್ಷತೆಯಲ್ಲಿ ಮಾವಿನ ಹಣ್ಣಿನ ಕುರಿತು ಗೀತ ಗಾಯನ ಕವಿತೆಗಳ ಪ್ರಸ್ತುತಿ ಮತ್ತು ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಮೇ25 ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕುಮಟಾ ಶಾಸಕ ದಿನಕರ ಶೆಟ್ಟಿ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಗಣ್ಯರು ಉಪಸ್ಥಿತರಿರಲಿದ್ದಾರೆ.ಮಾವಿನ ಹಣ್ಣಿಗೆ ಸಂಬಂಧಿಸಿದಂತೆ ಬೆಳೆಗಾರರು, ಮಾರಾಟಗಾರರು,ಮರ ಹತ್ತುವವರು, ಕಸಿ ಕಟ್ಟುವವರು ಹೀಗೆ ಹಲವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.

ಮಾವು ಮೇಳದಲ್ಲಿ ಅಂಕೋಲಾ ತಾಲೂಕಿನ ಮಾವು ಬೆಳೆಗಾರರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಬೆಳೆಗಾರರು ಭಾಗವಹಿಸಲಿದ್ದು ಹೊರಗಿನಿಂದ ಬಂದ ಬೆಳೆಗಾರರಿಗೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಅವರು ಮಾವು ಮೇಳದಲ್ಲಿ ಮಾವಿನ ಹಣ್ಣಿನ ಜೊತೆಗೆ ಮಾವಿನ ಕಾಯಿ ಮತ್ತು ಹಣ್ಣಿನ ಉತ್ಪನ್ನಗಳು ವಿವಿಧ ಬಗೆಯ ಮಾವಿನ ಸಸಿಗಳು ಸಹ ಮಾರಾಟಕ್ಕೆ ಲಭ್ಯವಿರಲಿದೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾವು ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಅಂಕೋಲಾ ತಾಲೂಕಿನಲ್ಲಿ ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತಿದ್ದು ಅಂಕೋಲಾದ ಸುಪ್ರಸಿದ್ಧ ಕರಿ ಇಶಾಡ ಮಾವಿನ ಹಣ್ಣಿಗೆ ಜಿ.ಐ ಟ್ಯಾಗ್ ಅಂತರಾಷ್ಟ್ರೀಯ ಮಾನ್ಯತೆಗೆ ಪ್ರಥಮ ಮಾವು ಮೇಳದ ಮೂಲಕ ಆಗ್ರಹಿಸಲಾಗಿತ್ತು ಇದೀಗ ಕರಿ ಇಶಾಡ ಮಾವಿನ ಹಣ್ಣಿಗೆ ಅಂತರಾಷ್ಟ್ರೀಯ ಭೌಗೋಳಿಕ ವಿಶೇಷತೆಯ ಮಾನ್ಯತೆ ದೊರಕಿದ್ದು ಹಲವಾರು ಕಡೆಗಳಿಂದ ಮಾವಿನ ಹಣ್ಣಿಗೆ ಬೇಡಿಕೆ ಬರತೊಡಗಿದೆ ರೈತರಿಗೆ ಅನುಕೂಲ ಆಗುವಂತೆ
ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿರುವ ಸಮಾಧಾನ ಬೆಳೆಗಾರರ ಸಮಿತಿಗೆ ಇದ್ದು ಮಾವು ಮೇಳವನ್ನು ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದು ನಾಗರಾಜ ನಾಯಕ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೆಳೆಗಾರರ ಸಮಿತಿ ಗೌರವಾಧ್ಯಕ್ಷ ದೇವರಾಯ ನಾಯಕ, ಕಾರ್ಯದರ್ಶಿ ರಾಮಚಂದ್ರ ಹೆಗಡೆ,
ಪ್ರಮುಖರುಗಳಾದ ಜಗದೀಶ ನಾಯಕ, ಮಂಕಾಳ ಗೌಡ, ಬಿಂದೇಶ ನಾಯಕ, ಮಾದೇವ ಗೌಡ, ಹೊನ್ನಪ್ಪ ನಾಯಕ ಉಪಸ್ಥಿತರಿದ್ದರು.


Leave a Reply