ಹೇಳೋರಿಲ್ಲ ಕೇಳೋರಿಲ್ಲ ಜನಪ್ರತಿನಿಧಿಗಳ ಮಾತಿಗೂ ಕಿಮ್ಮತ್ತಿಲ್ಲ!ಪುರಸಭೆ ಅಧಿಕಾರಿಗಳ ಅಂದಾದರ್ಬಾರ್! ಮರಗಳ ಮಾರಣ ಹೋಮ!

Spread the love

ಅಂಕೋಲಾ: ಪರಿಸರ ದಿನಾಚರಣೆ ಹತ್ತಿರ ಬರುತ್ತಿದೆ ಅತ್ತ ಎಲ್ಲರೂ ಗಿಡಮರಗಳನ್ನು ಬೆಳೆಸಲು ಮಗ್ನರಾಗಿದ್ದಾರೆ,ಆದರೆ ಅಂಕೋಲಾ ಪುರಸಭೆ ಅಧಿಕಾರಿಗಳು ಮಾತ್ರ ಮರಗಳನ್ನು ಕಡಿದು,ಮರಗಳ ಮಾರಣಹೋಮವನ್ನೇ ನಡೆಸಿದ್ದಾರೆ.

ಹೌದು… ಜೂನ್ 5 ರಂದು ಪ್ರಪಂಚದಾದ್ಯಂತ ವಿಶ್ವ ಪರಿಸರ ದಿನಾಚರಣೆಯನ್ನು ಪುಟ್ಟ ಮಕ್ಕಳಿಂದ ಹಿಡಿದು ಪ್ರದಾನ ಮಂತ್ರಿಯವರೆಗೆ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಧ್ಯೇಯದೊಂದಿಗೆ ಗಿಡ ಮರಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತಾರೆ,ಆದರೆ ಇಲ್ಲಿಯ ಪುರಸಭೆ ಅಧಿಕಾರಿಗಳು ಮಾತ್ರ ಸ್ಮಶಾನ ಭೂಮಿಯಲ್ಲಿಯ ದೊಡ್ಡ ದೊಡ್ಡ ಮರಗಳನ್ನು ಕಡೆದು ಮಾರಣಹೋಮವನ್ನೇ ನಡೆಸಿದ್ದಾರೆ ಎನ್ನಲಾಗಿದೆ.

ತಾಲೂಕಿನ ಹಿಂದೂ ಸ್ಮಶಾನ ಭೂಮಿಯಲ್ಲಿ ದೊಡ್ಡ ದೊಡ್ಡ ಆಲದ ಮರಗಳನ್ನು ಬುಡದ ಸಮೇತ ಕಡೆಯುವ ಮೂಲಕ ಅಟ್ಟಹಾಸ ಮೆರೆದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

ಅರಣ್ಯ ಇಲಾಖೆಗೂ ಮಾಹಿತಿ ಇಲ್ಲ,ಜನಪ್ರತಿನಿಧಿಗಳಿಗೆ ಕ್ಯಾರೇ ಇಲ್ಲ!

ಹಿಂದೂ ಸ್ಮಶಾನ ಭೂಮಿಯ ಸುತ್ತಲೂ ಜನಪ್ರತಿನಿಧಿಗಳು ಕಾಂಪೌಂಡ್ ನಿರ್ಮಿಸಲು ಮೀಸಲಿಟ್ಟ ಹಣವನ್ನು ಸ್ಮಶಾನದ ಮದ್ಯ ಬಾಗದಲ್ಲಿ ರಸ್ತೆ ನಿರ್ಮಾಣ ಮಾಡಿ ಅದರಲ್ಲಿಯೂ ಸಂಬಂಧವೇ ಇಲ್ಲದೆ ತನ್ನ ಪಾಡಿಗೆ ಇದ್ದ ಆಲದ ಮರಗಳನ್ನು ಕಡಿದು ಹಾಕಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೂ ಮಾಹಿತಿ ನೀಡದೆ, ಅವರಿಂದಲೂ ಯಾವುದೇ ಪರವಾನಗಿ ಪಡೆಯದೆ ಮರಗಳನ್ನು ಕಡೆದು ಅಂದಾದರ್ಬಾರ್ ನಡೆಸಿದ್ದಾರೆ. ಈ ಬಗ್ಗೆ ಪುರಸಭೆ ಅಧ್ಯಕ್ಷರಿಂದ ಹಿಡಿದು ಜನಪ್ರತಿನಿಧಿಗಳಿಗೂ ಮಾಹಿತಿ ನೀಡದೆ ತಮ್ಮ ಮನಸ್ಸಿಗೆ ಬಂದಹಾಗೆ ಮಾಡುತ್ತಿರುವ ಮುಖ್ಯಾಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪುರಸಭೆ ಸದಸ್ಯರು ದೂರು ನೀಡಿದ್ದಾರೆ ಎನ್ನಲಾಗಿದೆ.

ಶವಸಂಸ್ಕಾರಕ್ಕೆ ನೆರವಾಗಿದ್ದ ಆಲದ ಮರಗಳು!

ಕೋಟೆವಾಡದ ಹಿಂದೂ ಸ್ಮಶಾನ ಭೂಮಿ ಅಂಕೋಲೆಯ ಸರ್ವಜನಾಂಗದ ಶಾಂತಿಧಾಮವೂ ಹೌದು ಪ್ರತಿನಿತ್ಯ ಇಲ್ಲಿ ಅಂತ್ಯಸಂಸ್ಕಾರ ನಡೆಯುತ್ತಿರುವುದು ಸಾಮಾನ್ಯ ಇಲ್ಲಿ ಇರುವ ದೊಡ್ಡ,ದೊಡ್ಡ ಆಲದಮರಗಳು  ಗಾಳಿಯ ರಭಸಕ್ಕೆ ಶವಸಂಸ್ಕಾರದಲ್ಲಿ ಯಾವುದೇ ಅಗ್ನಿ ಅವಘಡಗಳು ಸಂಭವಿಸದಂತೆ ಗಾಳಿಯನ್ನು ತಡೆಯುವಲ್ಲಿ ಮುಖ್ಯಪಾತ್ರ ವಹಿಸುತ್ತಿತ್ತು,ಹಾಗೆಯೇ ಬೇಸಿಗೆಯಲ್ಲಿ ಶವಸಂಸ್ಕಾರಕ್ಕೆ ಬಂದವರಿಗೆ ಸೂರಿನಂತಿದ್ದ ಮರಗಳ ಬುಡ ಮೇಲಾಗಿದ್ದು ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ಕುರಿತು ಪುರಸಭೆ ಜನಪ್ರತಿನಿಧಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು,ಕಾನೂನು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *