ಕಡಿದ ಕಾಂಡ ನೆಟ್ಟು ಪರಿಸರ ದಿನಾಚರಣೆ ಆಚರಿಸಿದ ಪುರಸಭೆ ಅಧಿಕಾರಿಗಳು! ಅಜ್ಞಾನದ ಪಾರುಪತ್ಯಕ್ಕೆ ಬಲಿಯಾದ ಮರ ಗಿಡಗಳು!

Spread the love

ಅಂಕೋಲಾ: ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬಂತೆ ಪುರಸಭೆ ಅಧಿಕಾರಿಗಳ ಕಾರ್ಯ ತಾಲೂಕಿನಾದ್ಯಂತ ನಗೆ ಪಾಟಲಿಗೆ ಎಡೆಮಾಡಿಕೊಟ್ಟ ಘಟನೆ ಪುರಸಭೆ ವ್ಯಾಪ್ತಿಯ ಹಿಂದೂ ಸ್ಮಶಾನ ಭೂಮಿಯಲ್ಲಿ ನಡೆದಿದೆ.

ಹೌದು..ವಿಶ್ವಾದ್ಯಂತ ಇಂದು ಪರಿಸರ ದಿನಾಚರಣೆ  ಸರಕಾರದ ಪ್ರತಿಯೊಂದು ಇಲಾಖೆ,ಸಂಸ್ಥೆ ಹಾಗೂ ಶಾಲಾ-ಕಾಲೇಜುಗಳಲ್ಲಿ ಗಿಡನೆಟ್ಟು ಪರಿಸರ ಸಂರಕ್ಷಣೆಯ ವೇದವಾಕ್ಯವನ್ನು ಪಠಿಸಲಾಗುತ್ತದೆ. ಆದರೆ ಅಂಕೋಲಾ ತಾಲೂಕಿನ ಪುರಸಭೆ ಅಧಿಕಾರಿಗಳು ಮಾಡಿದ ತಪ್ಪನ್ನು ಮುಚ್ಚಿಹಾಕಲು ತಾವೇ ಕಡಿದಿದ್ದ ಆಲದಮರದ ಕಾಂಡವನ್ನು ಮತ್ತೆ ನೆಟ್ಟಿದ್ದು ಸಾರ್ವಜನಿಕ ವಲಯದಲ್ಲಿ ಹಾಸ್ಯಾಸ್ಪದವಾಗಿ ಚರ್ಚೆಯಾಗುತ್ತಿದೆ.

ಕಡಿದ ಮರವನ್ನು ಮತ್ತೆ ನೆಟ್ಟ ಪುರಸಭೆ ಅಧಿಕಾರಿಗಳು!

ಹದಿನೈದು ವರ್ಷಕ್ಕೂ ಹಳೆಯದಾದ ಮರಗಳನ್ನು ಕಡಿದು ಮರಗಳ ಮಾರಣಹೋಮ ಮಾಡಿದ್ದು, ಪುರಸಭೆ ಅಧಿಕಾರಿಗಳ ಅಂದಾದರ್ಬಾರ್! ಸ್ಮಶಾನದಲ್ಲಿದ್ದ ಮರಗಳ ಮಾರಣ ಹೋಮ!ಎಂಬ ಶೀರ್ಷಿಕೆಯಡಿ ನುಡಿಜೇನು ಪತ್ರಿಕೆ ವರದಿ ಮಾಡಿದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿತ್ತು, ಹಿಂದೂ ಸ್ಮಶಾನ ಭೂಮಿ ಅಭಿವೃದ್ಧಿ ಕಮಿಟಿಯ ಮುಖ್ಯಸ್ಥರು ಸ್ಮಶಾನದ ಮರಗಳ ಮೇಲೆ ನಡೆದ ದೌರ್ಜನ್ಯದ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ಧಿಕ್ಕಾರ ಕೂಗಿ ಎಚ್ಚರಿಸಿದ್ದರು. ಅದರಂತೆಯೇ  ಮಾಡಿದ ತಪ್ಪನ್ನು ಮುಚ್ಚಿಹಾಕಲು ರಾತ್ರೋ ರಾತ್ರಿ ಬುಡದಲ್ಲೇ ಕತ್ತರಿಸಿದ ಮರವನ್ನು ಮತ್ತೆ ನೆಟ್ಟು ಹುಚ್ಚಾಟ ಪ್ರದರ್ಶಿಸಿದ್ದು ಸಾರ್ವಜನಿಕ ವಲಯದಲ್ಲಿ ಬಾರಿ ಹಾಸ್ಯಕ್ಕೀಡಾಗಿದೆ.

ತಮ್ಮ ತಪ್ಪು ಮುಚ್ಚಲು ಕಾಂಡವನ್ನು ನೆಟ್ಟ ಪುರಸಭೆ; ಜೆಸಿಬಿ ಬಳಕೆ; ದುಂದುವೆಚ್ಚ!

ಜನರ ತೆರಿಗೆ ಹಣ ಎಂದರೆ ಅಸಡ್ಡೆಯಂತಾಗಿದ್ದು,ಬೇಕಾಬಿಟ್ಟಿ ಖರ್ಚುಮಾಡುತ್ತಿರುವ ಪುರಸಭೆ ಅಧಿಕಾರಿಗಳ ವಿರುದ್ಧ ಜನರು ಪ್ರಶ್ನಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಿಂದೂ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ತಪ್ಪನ್ನು ಮುಚ್ಚಿಹಾಕಲು ತುಂಡರಿಸಿದ ಮರದ ಕಾಂಡಗಳನ್ನು ನೆಟ್ಟು ಜಾಣ ಕತ್ತೆಯಂತೆ ವರ್ತಿಸುತ್ತಿರುವ ಪುರಸಭೆ ಅಧಿಕಾರಿಗಳು ಪುರಸಭೆ ಜೆಸಿಬಿಯನ್ನು ಬೇಕಾಬಿಟ್ಟಿಯಾಗಿ ಉಪಯೋಗಿಸಿದ್ದಾರೆ. ಈ ಕುರಿತು ವಿಚಾರಿಸಿದ್ದಾಗ ಮುಖ್ಯಾಧಿಕಾರಿಗಳ ಅನುಮತಿಯ ಮೇರೆಗೆ ಕಾಂಡವನ್ನು ಮತ್ತೆ ನೇಡಲಾಗಿದೆ ಎಂದಿದ್ದಾರೆ.

ಜಿಲ್ಲಾಧಿಕಾರಿಗಳ ಮೌನ!

ಅಂಕೋಲಾ ಪುರಸಭೆಯಲ್ಲಿ ಇಷ್ಟೊಂದು ಅಚಾತುರ್ಯ ನಡೆಯುತ್ತಿದ್ದರೂ ಜಿಲ್ಲಾಧಿಕಾರಿಗಳು ಏಕೆ ಮೌನವಹಿಸಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಜಿಲ್ಲೆಯ ದಕ್ಷ ಜಿಲ್ಲಾಧಿಕಾರಿಗಳ ಸಾಲಿನಲ್ಲಿ ಸೇರುವ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಅಂಕೋಲಾ ಪುರಸಭೆ ವಿಚಾರದಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎನ್ನುವ ಪ್ರಶ್ನೆ ಎದುರಾಗಿದೆ.

ಅಧಿಕಾರಿಗಳು ಕಡಿದ ಜಾಗದಲ್ಲಿ ಮತ್ತೆ ಗಿಡ ನೆಟ್ಟ ಜನಪ್ರತಿನಿಧಿಗಳು!

ಸ್ಮಶಾನ ಭೂಮಿಯಲ್ಲಿ ಮರಗಳ ಮಾರಣಹೋಮ ನಡೆದ ಬೆನ್ನಲ್ಲೇ ತಮ್ಮ ಗಮನಕ್ಕೆ ತರದೇ ಪುರಸಭೆಯಲ್ಲಿ ಅಧಿಕಾರಿಗಳು ದರ್ಬಾರ್ ನಡೆಸುತ್ತಿರುವ ಕುರಿತು ಈ ಹಿಂದಿನಿಂದಲೂ ಕುಪಿತಗೊಂಡಿರುವ 18 ಸದಸ್ಯರು ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಇಂಜಿನಿಯರ ಜಲ್ಜಾ ನಾಯ್ಕ ಅವರನ್ನು ವರ್ಗಾವಣೆಗೊಳಿಸುವಂತೆ ಪಟ್ಟು ಹಿಡಿದಿದ್ದರು. ನಂತರದಲ್ಲಿ ಮತ್ತು ಮುಂದುವರೆದ ಅಧಿಕಾರಿಗಳ ದರ್ಪ ಸ್ಮಶಾನದಲ್ಲಿ ಜನಪ್ರತಿನಿಧಿಗಳ ವಿರುದ್ಧ ಕಾಮಗಾರಿ ನಡೆಸಿ ಮರಗಳನ್ನು ಕಡಿದಿರುವುದು ಪುರಸಭೆ ಅಧ್ಯಕ್ಷರು ಹಾಗೂ 18 ಸದಸ್ಯರಿಗೆ ಮತ್ತಷ್ಟು ಕೋಪಗೊಳ್ಳುವಂತೆ ಮಾಡಿದ್ದು,ಅಧಿಕಾರಿಗಳು ಮರಗಳನ್ನು ಕಡಿದ ಜಾಗದಲ್ಲಿ ಪರಿಸರ ದಿನಾಚರಣೆಯ ನಿಮಿತ್ತ ಅಲ್ಲಿಯೇ ಗಿಡ ನೆಡುವುದರ ಮೂಲಕ ಆಚರಿಸಿದ್ದು,ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *