Spread the love

ಅಂಕೋಲಾ:ಉತ್ತರ ಕನ್ನಡ ಜಿಲ್ಲೆ ಸಕಲ ಸೌಂದರ್ಯದ ಬೀಡಾಗಿದ್ದು, ಇಲ್ಲಿಯ ಪ್ರತಿಯೊಂದು ಜನಾಂಗಕ್ಕೂ ಅದರದ್ದೆಯಾದ ಸಂಸ್ಕೃತಿ,ಸಂಪ್ರದಾಯವಿದೆ ಈ ಹಿನ್ನೆಲೆಯಲ್ಲಿ ಯುವ ಸಾಹಿತಿಗಳು ಸಾಹಿತ್ಯ ಕೃಷಿಗೆ ಹೆಚ್ಚಿನ ಒತ್ತು ನೀಡಿ ಬಂಪರ್ ಬೆಳೆ ಬೆಳೆಯಬೇಕು ಎಂದು ನಿವೃತ್ತ ಎಡಿಜಿಪಿ ಜೀವನಕುಮಾರ್ ವಿ ಗಾಂವ್ಕರ್
ಕಿವಿ ಮಾತು ಹೇಳಿದರು.

ಅವರು ಕರ್ನಾಟಕ ಸಂಘ (ರಿ.)ಅಂಕೋಲಾ ಮತ್ತು ದೀನಬಂಧು ಸ.ಪ ಗಾಂವ್ಕರ್ ದತ್ತನಿಧಿ ಸಮಿತಿ,ಅಂಕೋಲಾ ವತಿಯಿಂದ ತಾಲೂಕಿನ ಶನಿವಾರ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಕರಾಗಿ ಆಗಮಿಸಿ ಮಾತನಾಡಿ ಸ ಪ ಗಾಂವ್ಕರ್ ರವರ ಕುಟುಂಬದ ಸದಸ್ಯನಾದ ನನಗೆ ಇಂತಹ ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಬಹುಮುಖ ವ್ಯಕ್ತಿತ್ವದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದ ಸ ಪ ಗಾಂವ್ಕರ್ ಶಿಕ್ಷಣ ಕ್ಷೇತ್ರದ ಹಾಗೂ ರಾಜಕೀಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ಜನಪ್ರಿಯತೆಗಳಿಸಿದವರು. ಅವರ ಸೇವೆಯನ್ನು ಮನಗಂಡ ಕರ್ನಾಟಕ ಸಂಘ ಅವರ ಹೆಸರಿನಲ್ಲಿ ದತ್ತಿನಿಧಿಯನ್ನು ಪ್ರಾರಂಭಿಸಿರುವುದು ಶ್ಲಾಘನೀಯ,ಅಂಕೋಲೆಯ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಈ ನಾಡಿಗೆ ಪರಿಚಯಿಸಿದ ಕೀರ್ತಿ ಶಾಂತಾರಾಮ ನಾಯಕ ಹಿಚ್ಕಡರವರದ್ದು ಎಂದರು.ಅದರಂತೆಯೇ ಸಾಹಿತಿ ಶಾಂತಾರಾಮ ನಾಯಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಪ್ರಶಸ್ತಿಯ ತೂಕವನ್ನು ಮತ್ತಷ್ಟು ಹೆಚ್ಚಿಸಿದವರು. ಕರ್ನಾಟಕ ಸಂಘ ಸಾಹಿತಿಗಳಿಗೆ ಬಲತುಂಬುವಂತ ಸಂಘಟನೆಯಾಗಿ ಸತತ ಏಳು ದಶಕಗಳಿಂದ ತನ್ನ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ್ ಮಾತನಾಡಿ ಸ ಪ ಗಾಂವ್ಕರ ವ್ಯಕ್ತಿಯಲ್ಲ ಅದೊಂದು ಶಕ್ತಿ,ಬಡ ಜನರ ಸೇವೆಗೆಂದು ಧರೆಗಿಳಿದ ದೇವಮಾನವ, ಅವರು ಕೇವಲ ಶಿಕ್ಷಕ,ಸಾಹಿತಿ,ರಾಜಕಾರಣಿಯಾಗಿರದೆ ಭವ್ಯ ಪ್ರತಿಭೆಯಾಗಿದ್ದವರು, ಆದ್ದರಿಂದಲೇ ಅವರು ಇಂದಿಗೂ ಅದರ್ಶಪುರಷರೆಂದು ಗುರುತಿಸಿಕೊಂಡಿದ್ದಾರೆ. ಹಿರಿಯ ಕವಿಗಳು,ಸಾಹಿತಿಗಳು,ಪ್ರಬುದ್ಧ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕಹೊಂದಿದ್ದ ಸ ಪ ಗಾಂವ್ಕರ್,ನಾಡ ಕಂಡ ಅತ್ಯುನ್ನತ ಕವಿಗಳಾದ ದ ರಾ ಬೇಂದ್ರೆ,ಕುವೆಂಪುರವರಿಗೆ ಸಹಾಯ ಹಸ್ತ ಚಾಚಿದವರು ಎನ್ನುವುದು ನಾವು ನೆನೆಯಬೇಕಾಗಿದೆ. ಅವರೊಂದಿಗೆ ಅತೀ ಹತ್ತಿರದವನಾಗಿದ್ದ ನಾನು ಹಾಗೂ ನನ್ನ ಬದುಕನ್ನು ಅಚ್ಚುಕಟ್ಟಾಗಿ ರೂಪಿಸಿದ ಸ ಪ ಗಾಂವ್ಕರ್ ಪಾತ್ರ ಬಹುದೊಡ್ಡದು, ಅವರಿಗೆ ನಾನು ಸದಾ ಚಿರಋಣಿ, ಅಂತವರ ಹೆಸರಿನಲ್ಲಿ ನೀಡಲಾಗುವ ದತ್ತಿನಿಧಿ ಪ್ರಶಸ್ತಿಯನ್ನು ಪಡೆದ ನಾನೇ ಧನ್ಯ, ಹಾಗೂ ಈ ಪ್ರಶಸ್ತಿಯನ್ನು ನೀಡಿದ ಕರ್ನಾಟಕ ಸಂಘಕ್ಕೂ ನಾನು ಚಿರಋಣಿ ಎಂದರು.

ಕಾರ್ಯಕ್ರಮದ ಅದ್ಯಕ್ಷತೆವಹಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಕೆ ವಿ ನಾಯಕ ಕರ್ನಾಟಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಸ ಪ ಗಾಂವ್ಕರರವರ ಹೆಸರಿನಲ್ಲಿ ದತ್ತಿನಿಧಿಯನ್ನು ಪ್ರಾರಂಭಿಸಬೇಕೆನ್ನುವುದು ಅವರ ಅಭಿಮಾನಿಗಳ ಒತ್ತಾಸೆಯಾಗಿತ್ತು, ಅಂದು ನಿರ್ಣಯ ಕೈಗೊಂಡ ಕರ್ನಾಟಕ ಸಂಘ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲು ನಿರ್ಣಯಿಸಲಾಗಿತ್ತು, ದಾನಿಗಳ ಕೊಟ್ಟಂತ ಸಹಕಾರವೇ ಇಂದಿನ ಕಾರ್ಯಕ್ರಮದ ಮೂಲಕತೃ,ಅಂತಃಕರಣದ ಮನೋಭಾವವನ್ನು ಹೊಂದಿದ ಸ ಪ ಗಾಂವ್ಕರರವರು ಅಂಕೋಲಿಗರಿಗೆ ಎಂದೆಂದೂ ಆದರ್ಶ. ಸ ಪ ಗಾಂವ್ಕರ್ ಅವರ ಬದುಕಿನ ಮೌಲ್ಯವನ್ನು ಅರಿತ ಸಾಹಿತಿ ಶಾಂತಾರಾಮ ನಾಯಕರವರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಯಿತು ಎಂದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿ ಪ್ರೇರೇಪಿಸಲಾಯಿತು.

ನಿವೃತ್ತ ಪ್ರಾಧ್ಯಾಪಕ ಆರ್ ಜಿ ಗುಂದಿ ಸರ್ವರನ್ನು ಸ್ವಾಗತಿಸಿದರು,ನಿವೃತ್ತ ಪ್ರಾಧ್ಯಾಪಕ ಶ್ರೀಧರ ನಾಯಕ ಅತಿಥಿಗಳನ್ನು ಪರಿಚಯಿಸಿದರು.ಮಹಾಂತೇಶ ರೇವಡಿ ಸನ್ಮಾನ ಪತ್ರ ವಾಚಿಸಿದರು, ಜೈ ಹಿಂದ ಪ್ರೌಢ ಶಾಲೆಯ ಪ್ರಾಚಾರ್ಯರಾದ ಪ್ರಭಾಕರ ಬಂಟ ನಿರೂಪಿಸಿದರು.ಈ ಸಂದರ್ಭದಲ್ಲಿ ಸಾಹಿತಿಗಳು, ಕರ್ನಾಟಕ ಸಂಘದ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *