ಹೊನ್ನಾವರ : ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಇಬ್ಬರು ಸಜೀವ ದಹನ ಹೊಂದಿದ ಘನಘೋರ ಘಟನೆ ಮಂಗಳವಾರ ಮಧ್ಯರಾತ್ರಿ ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್ ಬಳಿ ನಡೆದಿದೆ.

ಹೌದು…ಸಿದ್ದಾಪುರದ ಮಾವಿನಗುಂಡಿಯಿಂದ ಗೇರುಸೊಪ್ಪ ಮಾರ್ಗವಾಗಿ ಹೊನ್ನಾವರ ಕಡೆ ಹೊರಟಿದ್ದ ಮಾರುತಿ ಸುಜುಕಿ ಜೆನ್ ಎನ್ನುವ ಕಾರೊಂದು ಮಂಗಳವಾರ ಮಧ್ಯರಾತ್ರಿ ಸೂಳೆಮುರ್ಕಿ ಕ್ರಾಸ್ ಬಳಿ ಅಪಘಾತವಾಗಿ ಕಾರಿನಲ್ಲಿದ್ದ ಇರ್ವರು ಗುರುತಿಸಲಾರದಷ್ಟು ಸುಟ್ಟು ಕರಕಲಾಗಿದ್ದು ಅಪಘಾತದ ಭಿಕರತೆಗೆ ಸಾಕ್ಷಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ಮಹೇಶ್ ,ಪಿಎಸೈ ಮಂಜುನಾಥ್, ಅಗ್ನಿಶಾಮಕದಳ ಅಧಿಕಾರಿಗಳು ಆಗಮಿಸಿ ಮೃತದೇಹವನ್ನು ಹೊನ್ನಾವರ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ ಎನ್ನಲಾಗಿದೆ.

ಸಾವಿನಮಕ್ಕಿಯಾದ ಸೂಳೆಮುರ್ಕಿ ಕ್ರಾಸ್ ! ಏನಿದು ಡೆಡ್ಲಿ ರಹಸ್ಯ?
ನಿರಂತರ ಅಪಘಾತದ ಕೇಂದ್ರ ಎನಿಸಿಕೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ 69 ರ ಸೂಳೆಮುರ್ಕಿ ಕ್ರಾಸ್ ಹೆದ್ದಾರಿ ಸಂಚಾರಿಗಳ ಪಾಲಿನ ಯಮಧೂತನಾಗಿ ಗುರುತಿಸಿಕೊಂಡಿದೆ. ಕಳೆದ ತಿಂಗಳಲ್ಲಿ ಇಲ್ಲಿಯೇ ಮೈಸೂರು ಮೂಲದ ಖಾಸಗಿ ಬಸ್ಸೊಂದು ಅಪಘಾತವಾಗಿ ವಿದ್ಯಾರ್ಥಿಯೋರ್ವ ಅಸುನೀಗಿದ್ದ, ಹಾಗೆಯೇ ಈ ಪ್ರದೇಶದಲ್ಲಿ ನೂರಾರು ಅಪಘಾತವಾಗಿದ್ದು ಅನೇಕಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ಇಲ್ಲಿಯ ಡೆಡ್ಲಿ ಅಪಘಾತಕ್ಕೆ ಕಾರಣವಾದರು ಏನು ಎನ್ನುವ ರಹಸ್ಯಕ್ಕೆ ಇಲ್ಲಿಯವರ ಉತ್ತರ ಏನೆಂದರೆ.ಹೆದ್ದಾರಿಯಲ್ಲಿಯ ಅವೈಜ್ಞಾನಿಕ ತಿರುವುಗಳು ಇವೆಲ್ಲ ಅಪಘಾತಕ್ಕೆ ಕಾರಣ ಎನ್ನಾಲಾಗುತ್ತಿದೆ, ಇಲ್ಲಿಯ ರಸ್ತೆಯನ್ನು ವ್ಯವಸ್ಥಿತವಾಗಿ ನಿರ್ಮಿಸಿಕೊಡಿ ಎಂದು ಸಾವಿರ ಬಾರಿ ಅಂಗಲಾಚಿದರು,ಅಧಿಕಾರಿಗಳು ಮಾತ್ರ ತೇಪೆ ಹಚ್ಚಿ ಕೈತೋಳಿದುಕೊಳ್ಳುತ್ತಿದ್ದಾರೆ ಎನ್ನುವುದು ಸಾರ್ವಜನಿಕ ಆಕ್ರೋಶದ ಕೂಗಾಗಿದೆ.

ಕಾರಿನಲ್ಲಿದ್ದವರ ಗುರುತು ಪತ್ತೆಗೆ ಮುಂದಾದ ಹೊನ್ನಾವರ ಪೊಲೀಸರು.
ಅಪಘಾತದಲ್ಲಿ ಸುಟ್ಟು ಕರಕಲಾದ ಕೆ ಎ 15 ಎಂ **** ನಂಬರಿನ ಮಾರುತಿ ಸುಜುಕಿ ಜೆನ್ ಕಾರಿನಲ್ಲಿದ್ದ ಇರ್ವರ ಪತ್ತೆಗೆ ಪೊಲೀಸರು ಮುಂದಾಗಿದ್ದು, ಸಿದ್ದಾಪುರ ಮೂಲದವರೆಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕುಮಟಾ ಮೂಲದ ಉದಯ ಎನ್ನುವವರ ಬಳಿ ಸಿದ್ದಾಪುರ ಮೂಲದ ಪ್ರಮೋದ ಎನ್ನುವವರು 30 ವರ್ಷದ ಹಳೆಯ ಜೆನ್ ಕಾರನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಕಾರಿನ ನೋಂದಣಿ ಕಾರ್ಯವು ಪೂರ್ಣಗೊಂಡಿಲ್ಲ ಎನ್ನಲಾಗಿದ್ದು, ಕಾರಿನಲ್ಲಿ ಪ್ರಮೋದ್ ರವರ ಆತ್ಮೀಯರಾದ ಮಂಜು** ಹಾಗೂ ಚಂದ್ರ*** ಎನ್ನುವವರು ಇದ್ದರು ಎಂದು ತಿಳಿದುಬಂದಿದ್ದು, ಏತಕ್ಕಾಗಿ ಹೊನ್ನಾವರಕ್ಕೆ ಬರುತ್ತಿದ್ದರು? ಕಾರು ಅಪಘಾತದ ರಭಸಕ್ಕೆ ಬೆಂಕಿಹತ್ತಿಕೊಂಡಿತ್ತೋ ಇಲ್ಲ ಸ್ಪೋಟ ಏನಾದರೂ ಸಂಭವಿಸಿತ್ತೋ ಎನ್ನುವುದು ಪೋಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಮೃತದೇಹವನ್ನು ಪತ್ತೆ ಹಚ್ಚಲು ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲದ ಅಧಿಕಾರಿಗಳು ದೌಡಾಯಿಸಿದ್ದು ಪರೀಕ್ಷೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಎಸ್ಪಿ ದೀಪನ್ ಎಂ ಎನ್ ಭೇಟಿ!
ಸೂಳೆಮುರ್ಕಿ ಬಳಿ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಆಗಮಿಸಿದ್ದು, ತನಿಖೆ ತಿವೃಗೊಳಿಸಿದ್ದಾರೆ. ಹಾಗೆಯೇ ಅಪಘಾತದ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದ್ದಾರೆ ಎನ್ನಲಾಗಿದೆ.


