ಯಲ್ಲಾಪುರ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಹಾಗೂ ಕರ್ನಾಟಕದ ಹೆಮ್ಮೆಯ ಕೆ.ಎಲ್. ರಾಹುಲ್ ಅವರು ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪ್ರಸಿದ್ಧ ಶಾನಭಾಗ್ ಹೋಟೆಲ್ ಗೆ ಅನಿರೀಕ್ಷಿತ ಭೇಟಿ ನೀಡಿ ತಿಂಡಿ ಸವಿದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದ ನಂತರ ಹಿಂದಿರುಗುವ ವೇಳೆ, ರಾಹುಲ್ ಅವರು ಯಲ್ಲಾಪುರದ ಶಾನಭಾಗ್ ಹೋಟೆಲ್‌ಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಯಾವುದೇ ದೊಡ್ಡ ಸ್ಟಾರ್ ಎನ್ನುವ ಗರ್ವವಿಲ್ಲದೆ, ಓರ್ವ ಸಾಮಾನ್ಯ ಗ್ರಾಹಕನಂತೆ ಹೋಟೆಲ್‌ಗೆ ಆಗಮಿಸಿದ ಅವರು ಅಲ್ಲಿನ ತಿಂಡಿಗಳನ್ನು ಸವಿದಿದ್ದ ಬಗ್ಗೆ ಹೋಟೆಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,ಈಗ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಸಿಸಿಟಿವಿಯಲ್ಲಿ ಸೆರೆಯಾದ ‘ಸರ್ಪ್ರೈಸ್’ ಭೇಟಿ!
ರಾಹುಲ್ ಅವರು ಹೋಟೆಲ್‌ಗೆ ಬಂದು ಹೋದ ವಿಚಾರ ಆರಂಭದಲ್ಲಿ ಯಾರಿಗೂ ತಿಳಿದಿರಲಿಲ್ಲ. ಆದರೆ, ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಭಾರತೀಯ ಕ್ರಿಕೆಟ್‌ನ ಈ ದಿಗ್ಗಜ ಆಟಗಾರ ಅಲ್ಲಿಗೆ ಬಂದು ಹೋದದ್ದು ಖಚಿತಪಟ್ಟಿದೆ. ಅತ್ಯಂತ ಸರಳವಾಗಿ ಬಂದು, ಸಮಾಧಾನವಾಗಿ ತಿಂಡಿ ಮುಗಿಸಿ ಅಲ್ಲಿಂದ ಹೊರಟಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಕಳೆದೇರಡು ದಶಕಗಳಿಂದ ಶುದ್ಧ ಸಸ್ಯಾಹಾರ ಮತ್ತು ಗುಣಮಟ್ಟದ ಆಹಾರಕ್ಕೆ ಹೆಸರಾಗಿರುವ ಶಾನಭಾಗ್ ಹೋಟೆಲ್, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರ ನೆಚ್ಚಿನ ತಾಣವಾಗಿದ್ದು, ಇದೀಗ ಅಂತರಾಷ್ಟ್ರೀಯ ಕ್ರಿಕೆಟಿಗರೊಬ್ಬರು ಇಲ್ಲಿಗೆ ಭೇಟಿ ನೀಡಿರುವುದು ಹೋಟೆಲ್‌ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಅಷ್ಟು ದೊಡ್ಡ ಆಟಗಾರರಾಗಿದ್ದರೂ ಯಾವುದೇ ಆಡಂಬರವಿಲ್ಲದೆ ನಮ್ಮೂರಿನ ಹೋಟೆಲ್‌ಗೆ ಬಂದು ತಿಂಡಿ ಸವಿದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೋಟೆಲ್ ಸಿಬ್ಬಂದಿ ಮತ್ತು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಈ ಸಿಸಿಟಿವಿ ದೃಶ್ಯಗಳು ವೈರಲ್ ಆಗುತ್ತಿದ್ದು, ಕೆ.ಎಲ್. ರಾಹುಲ್ ಅವರ ಈ ಸಿಂಪಲ್’ ನಡೆಗೆ ಕನ್ನಡಿಗರು ಮತ್ತು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


