Spread the love

ಶಿರಸಿ: ಜಿಲ್ಲೆಯ ಶಿರಸಿ ತಾಲ್ಲೂಕಿನ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ದನ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಅಂತರ ಜಿಲ್ಲಾ ದನ ಕಳ್ಳರ ಜಾಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂದಿತರಿಂದ ಕಳ್ಳತನಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ದಿನಾಂಕ 20-05-2026ರ ತಡರಾತ್ರಿಯಿಂದ 21-05-2026ರ ಮುಂಜಾನೆ ಅವಧಿಯಲ್ಲಿ ಬನವಾಸಿಯ ಮನೆಯೊಂದರ ಮುಂದೆ ರಸ್ತೆ ಪಕ್ಕದಲ್ಲಿ ಮಲಗಿದ್ದ ಕಪ್ಪು ಬಣ್ಣದ ಆಕಳನ್ನು ಯಾರೋ ಕಿಡಿಗೇಡಿಗಳು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಮೇ 23ರಂದು ಮಾಲೀಕರು ನೀಡಿದ ದೂರಿನನ್ವಯ ಬನವಾಸಿ ಪೊಲೀಸ್ ಠಾಣೆಯಲ್ಲಿ ಕಲಂ 303(2) ಬಿಎನ್‌ಎಸ್ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಅರಿತು ಕಳ್ಳರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು.

ಶಿವಮೊಗ್ಗ, ದಾವಣಗೆರೆ ಮೂಲದ ಆರೋಪಿಗಳ ಬಂಧನ

ವಿಶೇಷ ತಂಡವು ತನಿಖೆ ಚುರುಕುಗೊಳಿಸಿ ಜುಲೈ 16 ರಂದು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಹೊನ್ನೆಬಾಗಿ ಮೂಲದ ಚಾಲಕ ಮಹಮ್ಮದ ಇಸ್ಮಾಯಿಲ್ (20) ಮತ್ತು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕಾಗೆಕೋಡಮಗ್ಗಿ ನಿವಾಸಿಯಾದ ಅಡಿಕೆ ವ್ಯಾಪಾರಿ ಮಹಮ್ಮದ ವಾಸೀಂ (26) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಕಳ್ಳತನದ ಕೃತ್ಯಕ್ಕೆ ಬಳಸಲಾಗಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಟಾಟಾ ಇಂಟ್ರಾ (Tata Intra) ವಾಹನವನ್ನು (ನಂ: KA-17 AA 7082) ಜಪ್ತು ಮಾಡಿಕೊಳ್ಳಲಾಗಿದೆ. ಬಂಧಿತರನ್ನು ಸೂಕ್ತ ರಿಮಾಂಡ್‌ನೊಂದಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ

ಉತ್ತರ ಕನ್ನಡ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರಾದ ದೀಪನ ಎನ್. ಎಮ್. (IPS), ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಕೃಷ್ಣ ಮೂರ್ತಿ ಜಿ., ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಮತಿ ಗೀತಾ ಪಾಟೀಲ್ ಹಾಗೂ ಶಿರಸಿ ವೃತ್ತದ ಸಿ.ಪಿ.ಐ. ಈ. ಸಿ. ಸಂಪತ್ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಬನವಾಸಿ ಠಾಣೆಯ ಪಿ.ಎಸ್.ಐ (ಕಾ&ಸು) ಮಹಾಂತಪ್ಪ ಜಿ. ಕುಂಬಾರ ಹಾಗೂ ಪಿ.ಎಸ್.ಐ (ತನಿಖೆ) ರವೀಂದ್ರ ಬಿರಾದರ ನೇತೃತ್ವದ ತಂಡದಲ್ಲಿ ಎಎಸ್‌ಐ ಮಣಿಮಲನ್ ಕೆ. ಮೇಸ್ತ್ರಿ, ಸಿಎಚ್‌ಸಿ ಅಬ್ದುಲ್ ಸಮ್ಮದ್ ಅನ್ಸಾರಿ, ಸಿಪಿಸಿ ಬಸವರಾಜ್ ಜಾಡರ್, ಸಿಪಿಸಿ ಮಂಜಪ್ಪ ಪಿ., ಸಿಪಿಸಿ ರಾಜೇಶ್ ಪಿ.ಎಮ್. ಮತ್ತು ಸಿಪಿಸಿ ಜಗದೀಶ್ ಕೆ. ಪಾಲ್ಗೊಂಡಿದ್ದರು. ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಇಡೀ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.

Leave a Reply

Your email address will not be published. Required fields are marked *