ಅಂಕೋಲಾ: ಉದ್ಯಮಿ ಆರ್ ಎನ್ ನಾಯಕ ಹತ್ಯೆಯ ನಂತರದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ಹತ್ಯೆಗೆ ನಡೆದ ಸಂಚು ಈಗ ಕರಾವಳಿ ಭಾಗದಲ್ಲಿ ತಲ್ಲಣ ಮೂಡಿಸಿದೆ. ಈ ವ್ಯವಸ್ಥಿತ ಸಂಚಿನ ಹಿಂದೆ ಯಾವುದೋ ಒಂದು ಸಣ್ಣ ಗುಂಪಲ್ಲ, ಬದಲಿಗೆ ಅಂತರರಾಜ್ಯ ಸಂಪರ್ಕವಿರುವ ದೊಡ್ಡ ‘ಟೀಮ್’ ಕೆಲಸ ಮಾಡಿರುವುದು ಈಗ ಬಯಲಾಗುತ್ತಿದೆ.

ವಾರದಿಂದಲೇ ನಡೆದಿತ್ತು ಸ್ಕೆಚ್!
ವಿಶ್ವಸನೀಯ ಮೂಲಗಳ ಪ್ರಕಾರ, ದುಷ್ಕರ್ಮಿಗಳ ತಂಡ ಕಳೆದ ಒಂದು ವಾರದಿಂದಲೇ ಗೋಪಾಲಕೃಷ್ಣ ನಾಯಕ ಅವರ ಪ್ರತಿ ಚಲನವಲನಗಳನ್ನು ಗಮನಿಸುತ್ತಿತ್ತು. ಹತ್ಯೆ ಮಾಡಲೆಂದೇ ಬಂದಿದ್ದ ಈ ಸುಪಾರಿ ತಂಡ ಕಳೆದ ಮೂರು ದಿನಗಳಿಂದ ಅಂಕೋಲೆಯಲ್ಲೇ ವಾಸ್ತವ್ಯ ಹೂಡಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಕ್ಷೌರದ ಅಂಗಡಿಯನ್ನೇ ಗುರಿ ಮಾಡಿದ್ದು ಯಾಕೆ?
ಯುವಕರೊಂದಿಗೆ ಅತೀ ಪ್ರೀತಿ ವಿಶ್ವಾಸದಿಂದ ಇರುವ ಗೋಪಾಲಕೃಷ್ಣ ನಾಯಕ ಯಾವತ್ತೂ ಒಬ್ಬರೇ ಇರುವವರಲ್ಲ,ಬದಲಾಗಿ ಹೋದಲ್ಲೆಲ್ಲ ಮಿತ್ರ ಬಳಗವನ್ನು ಹೊಂದಿರುವ ನಾಯಕ್ ತನ್ನೊಂದಿಗೆ ಕರೆದುಕೊಂಡು ಓಡಾಡುವರಾಗಿದ್ದರು, ಆದರೆ ಕ್ಷೌರಕ್ಕೆ ತೆರಳಿದ್ದರಿಂದ ಯಾರೊಬ್ಬರೂ ಅವರೊಂದಿಗೆ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ನಾಯಕ ಅವರು ಇಲ್ಲಿಗೆ ಬರುವ ನಿಖರ ಸಮಯವನ್ನು ತಿಳಿದಿದ್ದ ಆರೋಪಿಗಳು, ಅಲ್ಲಿ ಯಾವುದೇ ಪ್ರತಿರೋಧ ತೋರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅದೇ ಜಾಗವನ್ನು ‘ಫಿಕ್ಸ್’ ಮಾಡಿಕೊಂಡಿದ್ದರು ಎನ್ನಲಾಗಿದೆ.
ಎಸ್ಕೇಪ್ ಆಗಲು ಸ್ಥಳೀಯ ಕಾರನ್ನು ಬುಕ್ ಮಾಡಿಕೊಂಡಿದ್ದ ಗ್ಯಾಂಗ್!
ದುಷ್ಕರ್ಮಿಗಳು ಕೃತ್ಯಕ್ಕೆ ಗೋವಾ ನೋಂದಣಿ (GA05D0338) ಪೋರ್ಡ್ ಫಿಗೊ ಕಾರನ್ನು ಬಳಸಿದ್ದರು ಸಹ, ಕೃತ್ಯದ ಬಳಿಕ ಘಟನಾ ಸ್ಥಳದಿಂದ ಎಸ್ಕೇಪ್ ಆಗಲು ಸ್ಥಳೀಯ ಟ್ಯಾಕ್ಸಿ ಚಾಲಕರನ್ನು ಸಂಪರ್ಕಿಸಿ, ಸ್ಥಳೀಯರೋರ್ವರ ಕಾರನ್ನು ಮೊದಲೇ ಬುಕ್ ಮಾಡಲಾಗಿತ್ತು ಎನ್ನಲಾಗುತ್ತಿದ್ದು, ಅದೇ ಕಾರಿನಿಂದ ಗೋವಾಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರವಾರ ನಗರ ಠಾಣೆಯ ಪಿಎಸೈ ಉದ್ದಪ್ಪ ದರೆದಪ್ಪನವರ್ ಕಾರನ್ನು ಬೆನ್ನತ್ತಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸುಪಾರಿ ನೀಡಿದವರಾರು?
ದುಷ್ಕರ್ಮಿಗಳ ತಂಡದಲ್ಲಿ ಎಲ್ಲರೂ ಗಡಿ ರಾಜ್ಯದ ಗೋವಾ ಮೂಲದವರು ಎನ್ನುವ ಭಯಾನಕ ಮಾಹಿತಿ ಹೊರಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರೋರ್ವರು ಇರುವ ಬಗ್ಗೆ ಗುಸು..ಗುಸು..ಕೇಳುತ್ತಿದ್ದು ಆ ಓರ್ವನಿಗೆ ಪೊಲೀಸರು ಹುಡುಕಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು,ತನಿಖೆ ಚುರುಕುಗೊಂಡಿದೆ. ಈ ಹತ್ಯೆಗೆ ಸುಪಾರಿ ನೀಡಿದ ‘ಮಾಸ್ಟರ್ ಮೈಂಡ್’ ಯಾರು? ಎನ್ನುವ ಎಲ್ಲಾ ಊಹಾಪೋಹಗಳಿಗೆ ಪೊಲೀಸ್ ತನಿಖೆಯ ನಂತರ ಉತ್ತರ ಸಿಗಬೇಕಿದೆ.

ತಮ್ಮನ ಧೈರ್ಯ,ಗೋಪಾಲಕೃಷ್ಣ ನಾಯಕ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!
ಬುಧವಾರ ಕ್ಷೌರಕ್ಕೆಂದು ತೆರಳಿದ್ದ ಗೋಪಾಲಕೃಷ್ಣ ನಾಯಕ ಜೊತೆ ಅವರ ಸಹೋದರ ರಾಘವೇಂದ್ರ ನಾಯಕ ಕೂಡ ತೆರಳಿದ್ದರು, ಕ್ಷೌರದ ಬಳಿಕ ಗೋಪಾಲಕೃಷ್ಣ ನಾಯಕ ಕಾರಿನತ್ತ ಬರುತ್ತಿರುವ ಸಂದರ್ಭದಲ್ಲಿ ಏಕಾಏಕಿ ಮುಗಿಬಿದ್ದ ದುಷ್ಕರ್ಮಿಗಳ ತಂಡ ಚಾಕು ಮತ್ತು ರಾಡಿನಿಂದ ದಾಳಿ ನಡೆಸಿತ್ತು ಈ ಸಂದರ್ಭದಲ್ಲಿ ತಮ್ಮನಾದ ರಾಘವೇಂದ್ರ ನಾಯಕ ತಪ್ಪಿಸಲು ಮುಂದಾಗಿದ್ದು, ದುಷ್ಕರ್ಮಿಗಳ ತಂಡ ರಾಘವೇಂದ್ರ ನಾಯಕ ಮೇಲೆ ದಾಳಿಗೆ ಮುಂದಾಗಿತ್ತು, ಈ ಸಂದರ್ಭದಲ್ಲಿ ಗಾಯಗೊಂಡಿದ್ದ ಗೋಪಾಲಕೃಷ್ಣ ನಾಯಕ ಹಾಗೂ ರಾಘವೇಂದ್ರ ನಾಯಕ ಹತ್ತಿರದಲ್ಲೇ ಇದ್ದ ಹಣಕಾಸು ಸಂಸ್ಥೆಯೊಂದರ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು ಎನ್ನಲಾಗಿದೆ. ಒಂದು ವೇಳೆ ಗೋಪಾಲಕೃಷ್ಣ ನಾಯಕ ಅವರ ಜೊತೆ ಅವರ ತಮ್ಮ ರಾಘವೇಂದ್ರ ಇಲ್ಲದಿದ್ದರೆ ಇಂದು ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಘಟನೆಯ ಸಮಯದಲ್ಲಿ ರಾಘವೇಂದ್ರ ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆಯೇ ಅಣ್ಣನ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. “ತಮ್ಮನ ಜೊತೆಗಿಲ್ಲದಿದ್ದರೆ ಅಣ್ಣ ಬದುಕುಳಿಯುವುದೇ ಅನುಮಾನವಿತ್ತು” ಎಂದು ಪ್ರತ್ಯಕ್ಷದರ್ಶಿಗಳು ಚರ್ಚಿಸಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ಮೊಬೈಲ್ ಲೊಕೇಶನ್ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದು,ನಾಲ್ವರನ್ನು ಈಗಾಗಲೇ ಬಂಧಿಸಿದ್ದಾರೆ,ಬಂಧಿತರಿಂದ ಹತ್ಯೆಗೆ ಸಂಚು ನಡೆಸಿದ ಕುರಿತು ತನಿಖೆ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.

ಹಲ್ಲೆಯ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಜನಸ್ತೋಮ!
ಬುಧವಾರ ಗೋಪಾಲಕೃಷ್ಣ ನಾಯಕ ಹತ್ಯೆಗೆ ಸಂಚು ಹಾಕಿ ಹಲ್ಲೆ ಮಾಡುತ್ತಿದ್ದಂತೆಯೇ ಸುದ್ದಿ ತಿಳಿದ ತಕ್ಷಣ ಅಪಾರ ಅಭಿಮಾನಿಗಳು ಮತ್ತು ಆತ್ಮೀಯರು ಆಸ್ಪತ್ರೆಗೆ ದಾವಿಸಿ ಆರೋಗ್ಯವನ್ನು ವಿಚಾರಿಸಿದ್ದಾರೆ.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ತೆರಳುವ ಸಂದರ್ಭದಲ್ಲಿ ಅಭಿಮಾನಿಗಳಿಗೆ ಕೈಮುಗಿದು ಆಂಬ್ಯುಲೆನ್ಸ್ ಹತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಈ ಕುರಿತು ಕೃತ್ಯ ಎಸಗಿದವರಿಗೆ ಸರಿಯಾದ ಶಿಕ್ಷೆ ನೀಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.


