ಸಿದ್ದಾಪುರ: ಜೋಗ ಮತ್ತು ಸಿದ್ದಾಪುರ ಮಾರ್ಗದ ಘಟ್ಟ ಪ್ರದೇಶದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಬಸ್ ದುರಂತವೊಂದು ಕೆಎಸ್ಆರ್ಟಿಸಿ (KSRTC) ಬಸ್ ಚಾಲಕನ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್ ತಪ್ಪಿದೆ. ಚಾಲಕನ ಜಾಣ್ಮೆ ಹಾಗೂ ಸಾಹಸದಿಂದ ಬಸ್ಸಿನಲ್ಲಿದ್ದ ಸುಮಾರು 30 ರಿಂದ 40 ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿದ್ದಾಪುರ ಮಾರ್ಗದ ಘಟ್ಟವನ್ನು ಹತ್ತಿ ಬಂದ ನಂತರ, ಅಪಾಯಕಾರಿ ತಿರುವೊಂದರಲ್ಲಿ ಕೆಎಸ್ಆರ್ಟಿಸಿ ಬಸ್ಸಿನ ಸ್ಟೇರಿಂಗ್ ಏಕಾಏಕಿ ಲಾಕ್ (Steering jam) ಆಗಿದೆ. ಎಷ್ಟೇ ಪ್ರಯತ್ನಪಟ್ಟರೂ ಬಸ್ಸು ತಿರುಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನ ನಿಯಂತ್ರಣಕ್ಕೆ ಸಿಗದೆ, ರಸ್ತೆಯ ಪಕ್ಕದ ಆಳವಾದ ಪ್ರಪಾತಕ್ಕೆ ವಾಲುತಿದ್ದ ಬಸ್ಸನ್ನು ಕಂಡು ಪ್ರಯಾಣಿಕರು ಒಂದು ಕ್ಷಣ ಬೆಚ್ಚಿಬಿದ್ದಿದ್ದರು.
ಈ ವೇಳೆ ಎದೆಗುಂದದ ಕಾನಗೂಡು ಮೂಲದ ಚಾಲಕ ಷಣ್ಮುಖ ನಾಯ್ಕ್ ಅವರು ಜಾಣ್ಮೆ ಮೆರೆದಿದ್ದಾರೆ. ಆಳಕ್ಕೆ ಬೀಳುತ್ತಿದ್ದ ಬಸ್ಸನ್ನು ರಕ್ಷಿಸಲು ತಕ್ಷಣವೇ ಎಚ್ಚೆತ್ತುಕೊಂಡ ಅವರು, ಬಸ್ಸನ್ನು ರಸ್ತೆಯ ಪಕ್ಕದಲ್ಲಿದ್ದ ಮಣ್ಣಿನ ಗುಡ್ಡಕ್ಕೆ (ಧರೆಗೆ) ಡಿಕ್ಕಿ ಹೊಡೆಸಿದ್ದಾರೆ.
ಮಣ್ಣಿನ ಗುಡ್ಡಕ್ಕೆ ನುಗ್ಗಿಸುವಾಗಲೂ ಮುಂಭಾಗದಲ್ಲಿದ್ದ ವಿದ್ಯುತ್ ಕಂಬಕ್ಕೆ (Current pole) ವಾಹನ ತಗುಲದಂತೆ ಅತ್ಯಂತ ಎಚ್ಚರಿಕೆಯಿಂದ ಬಸ್ಸನ್ನು ನಿಯಂತ್ರಿಸಿದ್ದಾರೆ. ಚಾಲಕ ಷಣ್ಮುಖ ನಾಯ್ಕ್ ಅವರ ಈ ದಿಟ್ಟ ನಿರ್ಧಾರದಿಂದಾಗಿ ಬಸ್ಸಿನಲ್ಲಿದ್ದ 30-40 ಜನ ಪ್ರಯಾಣಿಕರಿಗೆ ಯಾವುದೇ ಸಣ್ಣಪುಟ್ಟ ಗಾಯಗಳಾಗದೆ ಸಂಪೂರ್ಣ ಸುರಕ್ಷಿತವಾಗಿ ಪಾರಾಗಿದ್ದಾರೆ.
ಒಂದು ವೇಳೆ ಚಾಲಕ ಕೊಂಚ ಯಾಮಾರಿದ್ದರೂ ಬಸ್ಸು ಪ್ರಪಾತಕ್ಕೆ ಬಿದ್ದು ಅಥವಾ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಯಿತ್ತು. ತಮ್ಮ ಪ್ರಾಣ ಉಳಿಸಿದ ಕೆಎಸ್ಆರ್ಟಿಸಿ ಚಾಲಕ ಷಣ್ಮುಖ ನಾಯ್ಕ್ ಕಾನಗೂಡು ಅವರ ಕಾರ್ಯಕ್ಷಮತೆ, ಧೈರ್ಯ ಹಾಗೂ ಸಮಯಪ್ರಜ್ಞೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು, ಸ್ಥಳೀಯರು ಹಾಗೂ ಇಲಾಖೆಯ ಅಧಿಕಾರಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸುತ್ತಿದ್ದಾರೆ.
