Spread the love

ಅಂಕೋಲಾ: ಅನಾರೋಗ್ಯದ ಹಿನ್ನೆಲೆಯಲ್ಲಿ ರಕ್ತ ಪರೀಕ್ಷೆ ಮಾಡಿಸಲು ಮಗನೊಂದಿಗೆ ಬೈಕಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೃದ್ಧೆಯೊಬ್ಬರಿಗೆ ರಭಸವಾಗಿ ಬಂದ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ, ಮಹಿಳೆ ಮೃತಪಟ್ಟಿರುವ ದಾರುಣ ಘಟನೆ ಅಂಕೋಲಾ ಪಟ್ಟಣದ ಅಂಬಾರಕೊಡ್ಲ ತಿರುವಿನಲ್ಲಿ ಸಂಭವಿಸಿದೆ.

ತಾಲೂಕಿನ ಶಿರಕುಳಿ ಮೂಲದ 74 ವರ್ಷದ ಲಲಿತಾ ನಾಯ್ಕ ಮೃತಪಟ್ಟ ದುರ್ದೈವಿ. ಶನಿವಾರ ಬೆಳಿಗ್ಗೆ 7.30 ರ ಸುಮಾರಿಗೆ ಇವರು ತಮ್ಮ ಮಗ ರವಿ ನಾಯ್ಕ ಅವರೊಂದಿಗೆ ಬೈಕಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಅಂಬಾರಕೊಡ್ಲ ತಿರುವಿನಲ್ಲಿ ಇವರ ಬೈಕ್ ಸಾಗುತ್ತಿದ್ದಾಗ, ಏಕಾಏಕಿ ಅತಿ ವೇಗವಾಗಿ ಬಂದ KA 30 A 1056 ನೋಂದಣಿಯ ಆಟೋ ರಿಕ್ಷಾ ಬೈಕಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ವೃದ್ಧೆ ಲಲಿತಾ ನಾಯ್ಕ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದರು ಎನ್ನಲಾಗಿದೆ. ಘಟನೆ ನಡೆದ ತಕ್ಷಣವೇ ಗಾಯಾಳುವನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅವರ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ದುರದೃಷ್ಟವಶಾತ್, ಜಿಲ್ಲಾ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. 

ಈ ಭೀಕರ ಅಪಘಾತದ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *