ಸಿದ್ದಾಪುರ: ಟೆಲಿಗ್ರಾಂ ಮೂಲಕ ಷೇರುಪೇಟೆಯಲ್ಲಿ (Stock Market) ಹಣ ಹೂಡಿಕೆ ಮಾಡುವ ಆಮಿಷವೊಡ್ಡಿ, ಕೃಷಿಕರೊಬ್ಬರಿಗೆ ಬರೋಬ್ಬರಿ 30 ಲಕ್ಷ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಶುರುವಾಗಿದ್ದು ಹೇಗೆ?
ಸಿದ್ದಾಪುರ ತಾಲೂಕಿನ ಹೆಗ್ಗನೂರು ಅಂಚೆಯ ಹರ್ತೆಬೈಲು ನಿವಾಸಿ, ಕೃಷಿ ಹಾಗೂ ಎಫ್.ಟಿ.ಟಿ.ಹೆಚ್ (FTTH) ಸರ್ವಿಸ್ ಉದ್ಯೋಗಿ ಬಾಲಚಂದ್ರ ಗಣಪತಿ ಹೆಗಡೆ (42) ವಂಚನೆಗೊಳಗಾದ ದುರ್ದೈವಿ. ಇವರ ಮೊಬೈಲ್ಗೆ ‘ಪ್ರಭಾಷ್ ಮಿಶ್ರಾ, ಸೆಬಿ ರಿಜಿಸ್ಟರ್ಡ್ ಸ್ಟಾಕ್ ಅನಾಲಿಸ್ಟ್’ ಎಂಬ ಹೆಸರಿನ ಅಧಿಕೃತ ಟೆಲಿಗ್ರಾಂ ಗ್ರೂಪ್ನಿಂದ ಮೆಸೇಜ್ ಲಿಂಕ್ ಒಂದು ಬಂದಿತ್ತು. ಆ ಲಿಂಕ್ ಕ್ಲಿಕ್ ಮಾಡಿದಾಗ ‘X11 ELITE HUB’ ಎಂಬ ಹೆಸರಿನ ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್ಮೆಂಟ್ ಗ್ರೂಪ್ ತೆರೆದುಕೊಂಡಿದೆ. ಇದರಲ್ಲಿ ಪ್ರತಿದಿನ ಷೇರುಪೇಟೆಯ ಹೂಡಿಕೆ ಬಗ್ಗೆ ಮಾಹಿತಿ ಬರುತ್ತಿರುವುದನ್ನು ಗಮನಿಸಿದ ಬಾಲಚಂದ್ರ ಅವರು, ವಂಚಕರ ಮಾತನ್ನು ನಂಬಿ ಅದರಲ್ಲಿ ‘ಸಿಟಾಡೆಲ್ ಟ್ರೇಡ್ ಅಕೌಂಟ್’ (Citadel Trade Account) ತೆರೆದಿದ್ದಾರೆ.
ಲಾಭದ ಆಸೆ ತೋರಿಸಿ 30 ಲಕ್ಷ ರೂ. ಪೀಕಿದ ಖದೀಮರು
ಗ್ರೂಪ್ನ ಅಡ್ಮಿನ್ ಶ್ಯಾಮ್ ರಾಜನ್, ಅಸಿಸ್ಟೆಂಟ್ ವೈದೇಹಿ ದೇಶಮುಖ್ ಹಾಗೂ ಅಕೌಂಟೆಂಟ್ ಮೂಲಕ ಬಾಲಚಂದ್ರ ಅವರ ಅಕೌಂಟ್ ಸೃಷ್ಟಿಸಲಾಗಿತ್ತು. ಹೂಡಿಕೆ ಮಾಡಿದ ಹಣ ಶೇ. 100ರಷ್ಟು ವೃದ್ಧಿಸಿದರೆ, ಅದರಲ್ಲಿ ಶೇ. 20ರಷ್ಟು ಕಮಿಷನ್ ಅನ್ನು ಗ್ರೂಪ್ನ ಮೂರನೇ ವ್ಯಕ್ತಿಯ ಬ್ಯಾಂಕ್ ಖಾತೆಗೆ ಪಾವತಿಸಿ ಉಳಿದ ಹಣವನ್ನು ಹಿಂಪಡೆಯಬಹುದು (Withdraw) ಎಂದು ಮೊದಲೇ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದನ್ನು ನಂಬಿದ ಬಾಲಚಂದ್ರ ಅವರು ಫೆಬ್ರವರಿ 18ರಂದು ಆರಂಭದಲ್ಲಿ 50 ಸಾವಿರ ರೂ. ಹೂಡಿಕೆ ಮಾಡಿದ್ದರು. ಬಳಿಕ ವಂಚಕರ ಆಮಿಷಕ್ಕೆ ಬಲಿಯಾಗಿ, ಹಂತ ಹಂತವಾಗಿ ದೀಪಕ್ ಕುಮಾರ್ ಮಹಾಂದ್ವಾರಿಯಾ ಎಂಬಾತನ ಯುಪಿಐ ಹಾಗೂ ಇತರ ಬ್ಯಾಂಕ್ ಖಾತೆಗಳಿಗೆ ಆನ್ಲೈನ್ ಮೂಲಕ ಒಟ್ಟು 30 ಲಕ್ಷ ರೂಪಾಯಿಗಳನ್ನು ಜಮೆ ಮಾಡಿದ್ದರು.
ಹಣ ಹಿಂಪಡೆಯಲು ಹೋದಾಗ ಅಸಲಿ ಬಣ್ಣ ಬಯಲು
ಬಾಲಚಂದ್ರ ಅವರು ಹೂಡಿಕೆ ಮಾಡಿದ್ದ ಬಂಡವಾಳವು ಆ್ಯಪ್ನಲ್ಲಿ ಶೇ. 300ರಷ್ಟು ಹೆಚ್ಚಾಗಿರುವಂತೆ ನಕಲಿಯಾಗಿ ತೋರಿಸಲಾಗಿತ್ತು. ಇದನ್ನು ನೋಡಿ ಖುಷಿಗೊಂಡ ಅವರು ಟ್ರೇಡಿಂಗ್ ನಿಲ್ಲಿಸಿ, ಒಪ್ಪಂದದಂತೆ ಶೇ. 20ರಷ್ಟು ಕಮಿಷನ್ ಹಣವನ್ನೂ ಪಾವತಿಸಿ ತಮ್ಮ ಲಾಭದ ಹಣವನ್ನು ಡ್ರಾ ಮಾಡಲು ಮುಂದಾಗಿದ್ದಾರೆ. ಈ ವೇಳೆ ವಂಚಕರು, ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದೆ, ಹೀಗಾಗಿ ತಕ್ಷಣವೇ ಇನ್ನೂ 10 ಲಕ್ಷ ರೂ. ಪಾವತಿಸಿದರೆ ಮಾತ್ರ ನಿಮ್ಮ ಸಂಪೂರ್ಣ ಹಣವನ್ನು ವಾಪಸ್ ಪಡೆಯಬಹುದು ಎಂದು ಸಬೂಬು ಹೇಳಿ ಹಣ ನೀಡಲು ನಿರಾಕರಿಸಿದ್ದಾರೆ.
ತಮ್ಮ ಹಣವನ್ನು ಹಿಂಪಡೆಯಲು ಸಾಧ್ಯವಾಗದೆ, ತಾವು ಸೈಬರ್ ವಂಚಕರ ಬೃಹತ್ ಜಾಲಕ್ಕೆ ಬಿದ್ದಿರುವುದು ಬಾಲಚಂದ್ರ ಅವರಿಗೆ ಅರಿವಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ಅವರು ಜೂನ್ 18ರಂದು ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯನ್ನು ವಿವರಿಸಿ ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನದ ಮೂಲಕ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುವ ಈ ಜಾಲದ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಾಯ್ದೆ ಹಾಗೂ ಐಟಿ ಆಕ್ಟ್ 2000ರ ಅಡಿ ದಾಖಲಿಸಿಕೊಂಡಿರುವ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.
