Spread the love

ದಾಂಡೇಲಿ: ದಾಂಡೇಲಿ – ಹಳಿಯಾಳ ರಾಜ್ಯ ಹೆದ್ದಾರಿಯ ತಾಟಗೇರಾ ಕ್ರಾಸ್ ಬಳಿ ಮಂಗಳವಾರ ರಾತ್ರಿ ಭೀಕರ ‘ಹಿಟ್ ಅಂಡ್ ರನ್’ (Hit and Run) ಪ್ರಕರಣ ಸಂಭವಿಸಿದೆ. ಬಡಕಾನಶಿರಡಾ ಗ್ರಾಮದ ನಿವಾಸಿ ಪಾರ್ವತಿ ಶಂಕರ ಕಾಂಬ್ರೇಕರ (50) ಮೃ*ತಪಟ್ಟ ದುರ್ದೈವಿಯಾಗಿದ್ದಾರೆ. ಇವರು ತಮ್ಮ ಪತಿ ಶಂಕರ ಸಿದ್ದಪ್ಪ ಕಾಂಬ್ರೇಕರ ಅವರ ಜೊತೆ ಮೊಮ್ಮಗನನ್ನು ನೋಡುವ ಸಲುವಾಗಿ ಆಲೂರಿನಲ್ಲಿರುವ ಮಗಳ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಅತಿವೇಗವಾಗಿ ಬಂದ ಬೊಲೆರೋ ವಾಹನವೊಂದು ಇವರ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಬಸ್‌ನಲ್ಲಿ ಪತಿಯ ತೊಡೆಯ ಮೇಲೆಯೇ ಉಸಿರು ಚೆಲ್ಲಿದ ಪತ್ನಿ

ಬೊಲೆರೋ ವಾಹನ (ಕೆಎ: 30, ಎ 2235) ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ಪಾರ್ವತಿ ಅವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿದೆ. ವಾಹನ ಚಲಾಯಿಸುತ್ತಿದ್ದ ಪತಿ ಶಂಕರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಬಳಿಕ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪತ್ನಿಯನ್ನು ಶಂಕರ ಅವರು ಸಾರಿಗೆ ಬಸ್ ಒಂದರಲ್ಲಿ ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡು ದಾಂಡೇಲಿಗೆ ಕರೆತಂದಿದ್ದಾರೆ. ಆನಂತರ ದಾಂಡೇಲಿ ಬಸ್ ನಿಲ್ದಾಣದಿಂದ ಪೊಲೀಸರು ಆಟೋರಿಕ್ಷಾದ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಪಾರ್ವತಿ ಅವರು ಮೃ*ತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.

ಪರಾರಿಯಾಗಿದ್ದ ಬೊಲೆರೋ ವಾಹನ ಒಂದೇ ಗಂಟೆಯಲ್ಲಿ ಜಪ್ತಿ

ಅಪಘಾತ ಎಸಗಿದ ಬಳಿಕ ಬೊಲೆರೋ ವಾಹನವು ಸ್ಥಳದಿಂದ ಪರಾರಿಯಾಗಿತ್ತು. ಆದರೆ, ಘಟನೆ ನಡೆದ ಕೇವಲ ಒಂದು ಗಂಟೆಯೊಳಗಾಗಿ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನವನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಮದರಕಂಡಿ, ಸಿಪಿಐ ಶಿವಾನಂದ ಅಂಬಿಗೇರ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬುಧವಾರ ಬೆಳಗ್ಗೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಿಪಿಐ ಅವರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಸದ್ಯ ಮೃ*ತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಾಯಲಾಗುತ್ತಿದೆ. ಘಟನೆ ಬಗ್ಗೆ ಮೃ*ತಳ ಪತಿ ಹಾಗೂ ಅವರ ಸಹೋದರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *