ಅಂಕೋಲಾ: ತಾಲೂಕಿನ ಕಲೇಶ್ವರ ಗ್ರಾಮದಲ್ಲಿ ಭಾರಿ ಗಾಳಿ ಮತ್ತು ಮಳೆಯ ಅಬ್ಬರಕ್ಕೆ ಬೃಹತ್ ಗಾತ್ರದ ಮರವೊಂದು ಏಕಾಏಕಿ ಮನೆಯೊಂದರ ಮೇಲೆ ಉರುಳಿ ಬಿದ್ದಿದೆ. ಗ್ರಾಮದ ನಿವಾಸಿ ದಯಾನಂದ ಶಂಕರ ಭಂಡಾರಿ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮರ ಬಿದ್ದ ರಭಸಕ್ಕೆ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಜಖಂಗೊಂಡಿದೆ. ಇದರ ಜೊತೆಗೆ ಮನೆಯೊಳಗಿದ್ದ ಪೀಠೋಪಕರಣಗಳು ಹಾಗೂ ಇತರ ದಿನಬಳಕೆ ವಸ್ತುಗಳಿಗೂ ಭಾರಿ ಹಾನಿಯಾಗಿದೆ.
ಊಟಕ್ಕೆ ಕುಳಿತಿದ್ದಾಗ ಅವಘಡ, ಸ್ವಲ್ಪದರಲ್ಲೇ ಪಾರಾದ ಜೀವ
ಮನೆಯಲ್ಲಿದ್ದ ಕುಟುಂಬಸ್ಥರು ಊಟ ಮಾಡಲು ಮುಂದಾಗುತ್ತಿದ್ದ ವೇಳೆಯೇ ಈ ದುರಂತ ಸಂಭವಿಸಿದೆ. ಮನೆಯವರು ಕುಳಿತಿದ್ದ ಅನತಿ ದೂರದಲ್ಲೇ ಮನೆಯ ಪಕಾಸಿ (ಮೇಲ್ಛಾವಣಿಯ ಮರದ ದಿಮ್ಮಿ) ಕಳಚಿಬಿದ್ದಿದೆ. ಅದೃಷ್ಟವಶಾತ್, ಅವಘಡ ಸಂಭವಿಸಿದ ತಕ್ಷಣವೇ ಮನೆಯಲ್ಲಿದ್ದವರು ಸುರಕ್ಷಿತವಾಗಿ ಹೊರಬಂದಿದ್ದರಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಒಂದು ವೇಳೆ ಸ್ವಲ್ಪ ಹೆಚ್ಚು-ಕಮ್ಮಿ ಆಗಿದ್ದರೂ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಯಿತ್ತು.
ಅಧಿಕಾರಿಗಳ ಭೇಟಿ, ಪರಿಹಾರದ ಭರವಸೆ
ಮನೆ ಮೇಲೆ ಮರ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ಮರ ತೆರವುಗೊಳಿಸುವ ಕಾರ್ಯಾಚರಣೆಗೆ ನೆರವಾದರು. ಬಳಿಕ ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಪ್ರಮಾಣವನ್ನು ಪರಿಶೀಲಿಸಿದ್ದಾರೆ. ಸರ್ಕಾರದ ನಿಯಮಾನುಸಾರ ಹಾನಿಗೊಳಗಾದ ಕುಟುಂಬಕ್ಕೆ ಶೀಘ್ರವೇ ಸೂಕ್ತ ಪರಿಹಾರ ಒದಗಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
