ಅಂಕೋಲಾ: ಜಿಲ್ಲೆಯ ಅಂಕೋಲಾ ಬಸ್ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಮೋಟಾರ್ ಸೈಕಲ್ ಕಳ್ಳತನ ಮಾಡಿದ್ದ ಸರಣಿ ಕಳ್ಳನನ್ನು ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿರಸಿಯ ಅರೇಕೊಪ್ಪ ನಿವಾಸಿ, 33 ವರ್ಷದ ಖಾಲಿದ ಷರೀಫ್ ಸಾಬ್ ಕನವಳ್ಳಿ ಬಂಧಿತ ಆರೋಪಿಯಾಗಿದ್ದಾನೆ.
ಜೂನ್ 26 ರಂದು ಬೆಳಿಗ್ಗೆ 07-10 ರಿಂದ 07-25 ರ ನಡುವಿನ ಅವಧಿಯಲ್ಲಿ ಅಂಕೋಲಾ ಬಸ್ ನಿಲ್ದಾಣದ ನೀರಿನ ಟ್ಯಾಂಕ್ ಹತ್ತಿರ ನಿಲ್ಲಿಸಿದ್ದ 35,000 ರೂಪಾಯಿ ಮೌಲ್ಯದ ಕೆಎ 30/ಇಇ-2938 ನೋಂದಣಿ ಸಂಖ್ಯೆಯ ಆಕ್ಟಿವಾ ಸ್ಕೂಟರ್ ಕಳ್ಳತನವಾಗಿತ್ತು. ಈ ಕುರಿತು ಸಲ್ಲಿಕೆಯಾಗಿದ್ದ ದೂರಿನ ಅನ್ವಯ ಕಲಂ 303 (2) ರಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.
ಪ್ರಕರಣದ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದ ಪೊಲೀಸರು, ಜುಲೈ 8 ರಂದು ಸಿಸಿಟಿವಿ ದೃಶ್ಯಾವಳಿ ಹಾಗೂ ಲಭ್ಯವಾದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ತಾನೇ ಅಂಕೋಲಾ ಬಸ್ ನಿಲ್ದಾಣದಲ್ಲಿದ್ದ ಮೋಟಾರ್ ಸೈಕಲ್ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆತನಿಂದ ಕದ್ದಿದ್ದ ಸ್ಕೂಟರ್ ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಬಂಧಿತ ಆರೋಪಿ ಸಣ್ಣಪುಟ್ಟ ಕಳ್ಳನಲ್ಲ, ಆತನ ವಿರುದ್ಧ ಈಗಾಗಲೇ ಶಿರಸಿ ಗ್ರಾಮೀಣ ಠಾಣೆಯಲ್ಲಿ 3, ಶಿರಸಿ ಎನ್.ಎಂ ಠಾಣೆಯಲ್ಲಿ 3, ಬನವಾಸಿ, ಯಲ್ಲಾಪುರ, ಕಾರವಾರ ಶಹರ, ಕುಮಟಾ, ಹಳಿಯಾಳ ಹಾಗೂ ಧಾರವಾಡ ಜಿಲ್ಲೆಯ ತಡಸ ಪೊಲೀಸ್ ಠಾಣೆಯಲ್ಲಿ ತಲಾ 1 ರಂತೆ ಒಟ್ಟಾರೆಯಾಗಿ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಕಾರವಾರ ಉಪವಿಭಾಗದ ಡಿವೈಎಸ್ಪಿ ಗಿರೀಶ ಎಸ್.ವಿ. ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಅಂಕೋಲಾ ಪೊಲೀಸ್ ಠಾಣೆಯ ಪಿಐ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ಪಿಎಸ್‌ಐಗಳಾದ ವಿಶ್ವನಾಥ ನಿಂಗೋಳ್ಳಿ, ಲಲಿತಾ ರಜಪೂತ, ಸಿಬ್ಬಂದಿಗಳಾದ ಪ್ರಶಾಂತ್ ನಾಯ್ಕ, ಮಹಾದೇವ ಸಿದ್ದಿ, ಆಸಿಫ್ ಆರ್.ಕೆ. ಹಾಗೂ ಗಿರೀಶ ಲಮಾಣಿ ಅವರನ್ನೊಳಗೊಂಡ ತಂಡವು ಆರೋಪಿಯನ್ನು ಹೆಡೆಮುರಿ ಕಟ್ಟಿದೆ. ಸರಣಿ ಬೈಕ್ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾದ ಅಂಕೋಲಾ ಪೊಲೀಸ್ ಅಧಿಕಾರಿ ಹಾಗೂ ಇಡೀ ಸಿಬ್ಬಂದಿ ತಂಡದ ದಕ್ಷ ಕಾರ್ಯವೈಖರಿಯನ್ನು ಉನ್ನತ ಅಧಿಕಾರಿಗಳು ಶ್ಲಾಘಿಸಿ ಅಭಿನಂದಿಸಿದ್ದಾರೆ.
