ಕಾರವಾರ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಹುಂಡಿ ಹಣ ಕಳವು ಆರೋಪಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.
ಕಾರವಾರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಟ್ರಸ್ಟ್ನಲ್ಲಿ ನಡೆದಿರುವ ಅಕ್ರಮಗಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಟ್ರಸ್ಟ್ನ ಇಬ್ಬರು ಪ್ರಮುಖ ಸದಸ್ಯರು ರಾಜೀನಾಮೆ ನೀಡಿರುವುದು ಹಾಗೂ ಎಂಟು ಮಂದಿಯನ್ನು ಬಂಧಿಸಿರುವುದು ಈ ಪ್ರಕರಣದ ಗಂಭೀರತೆಯನ್ನು ಎತ್ತಿತೋರಿಸುತ್ತದೆ ಎಂದರು.
ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಸೇರಿದಂತೆ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ಹಲವು ಹಿರಿಯ ಅಧಿಕಾರಿಗಳು ಟ್ರಸ್ಟ್ನೊಂದಿಗೆ ನೇರ ಸಂಬಂಧ ಹೊಂದಿದ್ದಾರೆ. ಹೀಗಿರುವಾಗ ಅಕ್ರಮಗಳ ಹೊಣೆಗಾರಿಕೆಯಿಂದ ಸರ್ಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅಯೋಧ್ಯೆ ರಾಮನ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಹುಂಡಿ ಹಣ ಲೆಕ್ಕ ಮಾಡುವ ಎಂಟು ಜನರನ್ನು ಮಾತ್ರ ಬಂಧಿಸಿ ತನಿಖೆ ಮಾಡಲಾಗುತ್ತಿದೆ. ಆದರೆ, ಹುದ್ದೆಗೆ ರಾಜೀನಾಮೆ ನೀಡಿದ ಚಂಪತ್ ರಾಯ್ ಹಾಗೂ ನೃಪೇಂದ್ರ ಮಿಶ್ರಾ ಅವರ ಮೇಲೆ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಅವರು ನೇರವಾಗಿ ಪ್ರಶ್ನಿಸಿದರು. ಈ ಭ್ರಷ್ಟಾಚಾರದ ಕುರಿತು ಪ್ರಧಾನಿಯಾಗಲಿ ಅಥವಾ ಸಂಘಪರಿವಾರದ ಪ್ರಮುಖರಾಗಲಿ ಬಾಯಿಬಿಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.
ಬಿಜೆಪಿ, ಆರ್ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಕೇವಲ ತಮ್ಮ ರಾಜಕೀಯ ಲಾಭಕ್ಕಾಗಿ ಶ್ರೀರಾಮನ ಹೆಸರನ್ನು ಬಳಸಿಕೊಂಡು ಹೈಜ್ಯಾಕ್ ಮಾಡಿವೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಂದೇಶವನ್ನು ರಾಮಾಯಣ ಸಾರುತ್ತದೆ. ಆದರೆ, ಸ್ವತಃ ರಾಮನ ಹೆಸರಿನಲ್ಲೇ ದೇವಸ್ಥಾನದ ಟ್ರಸ್ಟ್ನಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿರುವುದು ಅತ್ಯಂತ ವಿಪರ್ಯಾಸ ಹಾಗೂ ಗಂಭೀರ ವಿಷಯವಾಗಿದೆ. ಈ ಬಗ್ಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಸೇರಿದಂತೆ ಸಂಘ ಪರಿವಾರದ ಪ್ರಮುಖರು ಮೌನ ವಹಿಸಿರುವುದನ್ನು ಉಗ್ರಪ್ಪ ಕಟುವಾಗಿ ಟೀಕಿಸಿದರು. ಇದೇ ವೇಳೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತೋರಿದ ನೈತಿಕ ಹೊಣೆಗಾರಿಕೆಯ ಮಾದರಿಯನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು.
ಆರ್ಎಸ್ಎಸ್ ನಿಧಿ ಸಂಗ್ರಹದ ಬಗ್ಗೆ ಪಾರದರ್ಶಕತೆ ಇರಲಿ
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೇ ರಾಮಲಲ್ಲಾ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು ಎಂಬುದನ್ನು ಸ್ಮರಿಸಿದ ಅವರು, ಕಾಂಗ್ರೆಸ್ ಎಂದಿಗೂ ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಧಾನಿಯವರು ದೇಶದ ಪ್ರಧಾನಿಯಾಗಿ ನಡೆದುಕೊಳ್ಳಬೇಕೆ ಹೊರತು, ರಾಜಕೀಯ ಪ್ರಚಾರಕರಂತೆ ವರ್ತಿಸಬಾರದು ಎಂದು ಕಿವಿಮಾತು ಹೇಳಿದರು.
ಅಯೋಧ್ಯೆ ಹುಂಡಿ ಕಳವು ಪ್ರಕರಣದಿಂದ ಸಂಘಪರಿವಾರದ ಅಕ್ರಮಗಳು ಜಗಜ್ಜಾಹೀರಾಗಿವೆ. ಇದೇ ಕಾರಣಕ್ಕಾಗಿ ಆರ್ಎಸ್ಎಸ್ ನೋಂದಣಿ ಬಗ್ಗೆ ಕಾಂಗ್ರೆಸ್ ನಿರಂತರವಾಗಿ ಪ್ರಶ್ನಿಸುತ್ತಿದೆ. ಗುರು ದಕ್ಷಿಣೆ ಹೆಸರಿನಲ್ಲಿ ಸಂಗ್ರಹವಾಗುವ ಕೋಟ್ಯಂತರ ರೂಪಾಯಿ ಹಣದ ಮೂಲ ಮತ್ತು ಅದರ ಬಳಕೆ ಬಗ್ಗೆ ದೇಶದ ಜನತೆಗೆ ತಿಳಿಯಬೇಕಿದೆ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲಗುಟಕರ್, ಬಾಬು ಶೇಖ್ ಮುಂತಾದವರು ಉಪಸ್ಥಿತರಿದ್ದರು.
