ಕಾರವಾರ: ಮುಂಬರುವ ನೈಋತ್ಯ ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲಾದ್ಯಂತ 2026ರ ಜೂನ್ 1 ರಿಂದ ಆಗಸ್ಟ್ 31 ರವರೆಗೆ ಎಲ್ಲಾ ರೀತಿಯ ಜಲಸಾಹಸ ಕ್ರೀಡೆಗಳು ಹಾಗೂ ನೀರಾಧಾರಿತ ಮನರಂಜನಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀಪ್ರಿಯಾ ಕೆ. ಅವರು ಆದೇಶ ಹೊರಡಿಸಿದ್ದಾರೆ.
ಮಳೆಗಾಲದ ಅವಧಿಯಲ್ಲಿ ಭಾರಿ ಮಳೆ, ನದಿಗಳಲ್ಲಿ ನೀರಿನ ಹರಿವು ದಿಢೀರ್ ಹೆಚ್ಚಳ, ಹಠಾತ್ ಪ್ರವಾಹ, ಸಮುದ್ರದಲ್ಲಿನ ಬಲವಾದ ಅಲೆಗಳು ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಪ್ರಾಣಹಾನಿ ಸಂಭವಿಸುವ ಅಪಾಯವಿರುತ್ತದೆ. ಈ ಹಿನ್ನೆಲೆಯಲ್ಲಿ, ಮೇ 13 ರಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಯಾವುದೇ ರೀತಿಯ ಅನಾಹುತಗಳು ಹಾಗೂ ಪ್ರಾಣಹಾನಿಯನ್ನು ತಪ್ಪಿಸುವ ಉದ್ದೇಶದಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಯಾವೆಲ್ಲಾ ಚಟುವಟಿಕೆಗಳಿಗೆ ನಿಷೇಧ? ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 33 ಮತ್ತು 34 ರ ಅನ್ವಯ ಈ ಕೆಳಗಿನ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ:
- ನದಿ ರ್ಯಾಫ್ಟಿಂಗ್ (River Rafting) ಚಟುವಟಿಕೆಗಳು.
- ನದಿಗಳು, ಜಲಾಶಯಗಳು, ಹಿನ್ನೀರು, ಅಳಿವೆಗಳು ಮತ್ತು ಇತರ ಒಳನಾಡು ಜಲಮೂಲಗಳಲ್ಲಿ ಬೋಟಿಂಗ್ (Boating) ಮಾಡುವುದು.
- ಜೆಟ್ ಸ್ಕೀಯಿಂಗ್, ಕಯಾಕಿಂಗ್, ಬನಾನಾ ರೈಡ್, ಪ್ಯಾರಾಸೈಲಿಂಗ್, ಸ್ಪೀಡ್ ಬೋಟ್ ರೈಡ್‌ನಂತಹ ಜಲ ಕ್ರೀಡೆಗಳು.
- ಸ್ಕೂಬಾ ಡೈವಿಂಗ್ (Scuba Diving) ಮತ್ತು ಅದಕ್ಕೆ ಸಂಬಂಧಿಸಿದ ನೀರಿನೊಳಗಿನ ಚಟುವಟಿಕೆಗಳು.
- ಕರಾವಳಿ ಪ್ರದೇಶಗಳಲ್ಲಿ ನಡೆಯುವ ಸಮುದ್ರಾಧಾರಿತ ಪ್ರವಾಸೋದ್ಯಮ ಮತ್ತು ಮನರಂಜನಾ ಚಟುವಟಿಕೆಗಳು.
ಉಲ್ಲಂಘಿಸಿದರೆ ಕಠಿಣ ಕ್ರಮ:
ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಹಾಯಕ ಆಯುಕ್ತರು, ತಹಶೀಲ್ದಾರ್‌ಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದೇಶವನ್ನು ಉಲ್ಲಂಘಿಸುವ ಪ್ರವಾಸೋದ್ಯಮ ಸೇವಾ ಪೂರೈಕೆದಾರರು, ಏಜೆನ್ಸಿಗಳು ಅಥವಾ ಯಾವುದೇ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ರ ಅಡಿಯಲ್ಲಿ ಮತ್ತು ಇತರ ಅನ್ವಯಿಕ ಕಾನೂನುಗಳನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
