Spread the love

ಕಾರವಾರ: ಕಾರವಾರ ನಗರದಲ್ಲಿ ಹೆಚ್ಚುತ್ತಿರುವ ಬಿಡಾಡಿ ದನಗಳ ಹಾವಳಿಯಿಂದ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳನ್ನು ತಕ್ಷಣವೇ ಪರಿಹರಿಸುವಂತೆ ಆಗ್ರಹಿಸಿ ಪ್ರಗತಿಪರ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲಿಷಾ ಯಲಕಪಾಟಿ ಅವರ ನೇತೃತ್ವದಲ್ಲಿ ನಿಯೋಗವು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಇತ್ತೀಚಿನ ದಿನಗಳಲ್ಲಿ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಬಿಡಾಡಿ ದನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ರಸ್ತೆಯ ಮಧ್ಯದಲ್ಲೇ ಗುಂಪು ಸೇರಿ ನಿಲ್ಲುವುದು ಹಾಗೂ ಮಲಗುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಹಾಗೂ ಮಳೆಗಾಲದಲ್ಲಿ ರಸ್ತೆಯಲ್ಲಿರುವ ದನಗಳು ವಾಹನ ಸವಾರರ ಗಮನಕ್ಕೆ ಬಾರದೆ ಅಪಘಾತಗಳು ಸಂಭವಿಸುತ್ತಿದ್ದು, ದ್ವಿಚಕ್ರ ವಾಹನ ಸವಾರರು ಗಾಯಗೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಯೋವೃದ್ಧರು ಹಾಗೂ ಪಾದಚಾರಿಗಳು ರಸ್ತೆಯಲ್ಲಿ ಸುರಕ್ಷಿತವಾಗಿ ಸಂಚರಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಸದ ತೊಟ್ಟಿಗಳ ಬಳಿ ಗುಂಪು ಸೇರುವ ದನಗಳು ಕಸವನ್ನು ರಸ್ತೆಯಲ್ಲೆಲ್ಲಾ ಹರಡಿ ನಗರದ ಸ್ವಚ್ಛತೆಗೆ ಧಕ್ಕೆ ಉಂಟುಮಾಡುತ್ತಿವೆ. ಅಲ್ಲದೆ, ಜಾನುವಾರುಗಳು ಪರಸ್ಪರ ಕಾದಾಡುವ ವೇಳೆ ಸಾರ್ವಜನಿಕರ ಮೇಲೆ ಎರಗಿದ ಘಟನೆಗಳೂ ನಡೆದಿದ್ದು, ಜನರ ಸುರಕ್ಷತೆಗೆ ಅಪಾಯ ಎದುರಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳಿಗೆ ತಕ್ಷಣವೇ ಬಿಡಾಡಿ ದನಗಳನ್ನು ಸೆರೆಹಿಡಿದು ಸಮೀಪದ ಗೋಶಾಲೆಗಳಿಗೆ ಸ್ಥಳಾಂತರಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಜೊತೆಗೆ, ಜವಾಬ್ದಾರಿಯಿಲ್ಲದೆ ದನಗಳನ್ನು ಸಾರ್ವಜನಿಕ ರಸ್ತೆಗಳಿಗೆ ಬಿಡುವ ಮಾಲೀಕರನ್ನು ಗುರುತಿಸಿ, ಅವರ ವಿರುದ್ಧ ದಂಡ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಅಕ್ಬರ ಇನಾಮದಾರ, ನಾಗರಾಜ ದೊಡಮನಿ, ಈಶ್ವರ ಕೆ., ರಾಮಾಕಾಂತ ಗುನಗಿ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *