ಹೊನ್ನಾವರ: ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ‘ಹೊನ್ನಾವರ ಉತ್ಸವ’ ೨೦೨೫ಕ್ಕೆ (Honnavara ustava 2025) ಅದ್ಧೂರಿ ಚಾಲನೆ ದೊರೆತ್ತಿದ್ದು. ಮೊದಲ ದಿನದ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಕಲಾವಿದರ ಕಲಾ ಪ್ರದರ್ಶನದ ಜೊತೆಗೆ ಹೆಣ್ಣುಮಕ್ಕಳ ಫ್ಯಾಶನ್ ಶೋ ನೋಡುಗರ ಕಣ್ಣಿಗೆ ರಸದೌತಣ ನೀಡಿತ್ತು.

ಹೌದು…ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ಹಾಗೂ ಹೊನ್ನಾವರ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಹೊನ್ನಾವರ ಉತ್ಸವ-೨೦೨೫ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ ಮಾತನಾಡಿ ನಮ್ಮ ಕುಮಟಾ-ಹೊನ್ನಾವರ ಜನರು ಕಲಾ ಪ್ರೋತ್ಸಾಹಕರು. ಯಾವುದೇ ಕಾರ್ಯಕ್ರಮ ಮಾಡಿದರೂ ಅದಕ್ಕೆ ಪ್ರೋತ್ಸಾಹ ನೀಡುವ ಜೊತೆಗೆ ಸಹಕಾರ ನೀಡುವ ದೊಡ್ಡ ಗುಣ ಇದೆ. ತಾಲೂಕಿನಲ್ಲಿ ಸಾಕಷ್ಟು ಕಲಾವಿದರಿದ್ದು, ಅದರಲ್ಲೂ ಯಕ್ಷಗಾನ ಕಲಾವಿದರಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಪದ್ಮಶ್ರೀ ಪುರಸ್ಕೃತರಾದ ದಿ. ಚಿಟ್ಟಾಣಿಯವರು ನಮ್ಮೆಲ್ಲರ ಹೆಮ್ಮೆ ಎಂದರು.
ಹೊನ್ನಾವರ ಉತ್ಸವ ಸಮಿತಿಯ ಗೌರವಾಧ್ಯಕ್ಷ ಮಂಜುನಾಥ ಎಲ್ ನಾಯ್ಕ ಮಾತನಾಡಿ, ಹೊನ್ನಾವರ ಉತ್ಸವಕ್ಕೆ ಸುಮಾರು ಮೂರು ತಿಂಗಳ ಶ್ರಮ ಇದೆ. ಇಲ್ಲಿನ ಜನರಿಗೆ ಸಾಂಸ್ಕೃತಿಕ ರಸದೌತಣ ನೀಡಲು ಈ ಉತ್ಸವವನ್ನು ಹಮ್ಮಿಕೊಂಡಿದ್ದೇವೆ. ಕಲೆ, ಕಲಾವಿದರನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ನಾವೆಲ್ಲ ಸೇರಿ ಮಾಡೋಣ ಎಂದು ಕರೆ ನೀಡಿದರು.
ಹೊನ್ನಾವರ ಉತ್ಸವ ಸಮಿತಿಯ ಗೌರವಾಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಹೊನ್ನಾವರದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಕಲೆ, ಸಂಸ್ಕೃತಿಯನ್ನು ಬೆಳೆಸಿದ ಕಲಾವಿದರು, ಮಹನೀಯರಿದ್ದಾರೆ. ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮ ನಡೆದರೂ ತಾಲೂಕು ಮಟ್ಟದಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ನಡೆದಿರುವುದು ಬಹಳ ಕಡಿಮೆ. ಇಂಥ ದೊಡ್ಡ ಕಾರ್ಯಕ್ರಮ ಪ್ರತಿ ವರ್ಷ ಸಂಘಟಿಸುವ ಶಕ್ತಿ ಸಂಘಟಕರಿಗೆ ದೇವರು ನೀಡಲಿ. ಆ ಮೂಲಕ ಕಲೆ, ಸಂಸ್ಕೃತಿ ಬೆಳೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹೊನ್ನಾವರ ಪಟ್ಟಣ ಪಂಚಾಯತ್ ಸದಸ್ಯ ಶಿವರಾಜ ಮೆಸ್ತಾ, ಹೊನ್ನಾವರ ಹವ್ಯಕ ಅರ್ಬನ್ ನಿದೇರ್ಶಕ ಅರುಣ ಹಬ್ಬು ವೇದಿಕೆಯಲ್ಲಿದ್ದು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ನಾಗರಾಜ ಭಟ್ ಮಾತನಾಡಿ, ಪಕ್ಕದ ಕುಮಟಾದಲ್ಲಿ ವರ್ಷಕ್ಕೆ ಇಂಥ ಮೂರು ಕಾರ್ಯಕ್ರಮ ನಡೆಯತ್ತದೆ. ಆದರೆ ಹೊನ್ನಾವರ ಮಾತ್ರ ಯಾಕೆ ನಡೆಯುವುದಿಲ್ಲ ಎಂಬ ಚರ್ಚೆ ಇತ್ತು. ಆದರೆ ಕೃಷ್ಣಾನಂದ ಭಟ್ಟರ ತಂಡ ಬಹಳ ಶ್ರಮವಹಿಸಿ, ಈ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಪ್ರತಿ ವರ್ಷ ಇಂಥ ಕಾರ್ಯಕ್ರಮ ನಡೆಯುವಂತಾಗಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ರವಿ ಶೆಟ್ಟಿ ಕವಲಕ್ಕಿ, ಸಚಿನ್ ನಾಯ್ಕ ಧಾರೇಶ್ವರ, ಬಿಜೆಪಿ ಮುಖಂಡರಾದ ಗೋವಿಂದ ಗೌಡ ವಂದೂರು, ಮಹೇಶ ಮೇಸ್ತಾ, ಸುರೇಶ ಶೆಟ್ಟಿ, ಇತರರು ಇದ್ದರು. ಕಾರ್ಯಕ್ರಮದಲ್ಲಿ ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಕೃಷ್ಣಾನಂದ ಭಟ್ ಸ್ವಾಗತಿಸಿ, ಪ್ರಾಸ್ತಾವಿಸಿ, ವಂದಿಸಿದರು. ಶಿಕ್ಷಕ ಸುಧೀಶ್ ನಾಯ್ಕ ಮತ್ತು ಉಪನ್ಯಾಸಕ ಮಂಜುನಾಥ ಭಂಡಾರಿ ನಿರೂಪಿಸಿದರು. ಕಲಾವಿದ ಶ್ರೀರಾಮ ಜಾದೂಗಾರ್, ವಿಜಯ ಸೇನೆಯ ಅಧ್ಯಕ್ಷ ವಿನಾಯಕ ಆಚಾರಿ ಸಹಕರಿಸಿದರು.
ಬಳಿಕ ಬಿಗ್ ಬಾಸ್ ಖ್ಯಾತಿಯ ಚೈತ್ರ ಕುಂದಾಪುರ, ಹಂಸ, ನಟಿ ಬೃಂದಾ ಆಚಾರ್ಯ ಹೊನ್ನಾವರ, ನಟಿ ಕಾವ್ಯ ಗೌಡ, ಮಾಡ್ಲಿಂಗ್ ಹರ್ಷಿತಾ ರಾಠೋಡ್ ಅವರು ಕಲಾಭಿಮಾನಿಗಳ ಜೊತೆ ಮಾತನಾಡಿ ರಂಜಿಸಿದರು. ರ‍್ಯಾಂಪ್ ವಾಕ್ ಮಾಡಿದ ಮಾಡ್ಲಿಂಗ್ ಹರ್ಷಿತಾ ರಾಠೋಡ್ ಮತ್ತು ನಟಿ ಕಾವ್ಯ ಗೌಡ ಅವರು ಹೆಣ್ಣುಮಕ್ಕಳ ಫ್ಯಾಶನ್ ಶೋಗೆ ಚಾಲನೆ ನೀಡಿದರು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿನಿಯರು ಬಲೂ ಆಕರ್ಷಕವಾಗಿ ಫ್ಯಾಶನ್ ಶೋ ನಡೆಸಿಕೊಟ್ಟರು. ಬಹುತೇಕರು ಹಿಂದು ಸಂಪ್ರದಾಯದಂತೆ ಸೀರೆತೊಟ್ಟು ರ‍್ಯಾಂಪ್ ವಾಕ್ ಮಾಡಿ ಗಮನ ಸೆಳೆದರು.


Leave a Reply