ಅಂಕೋಲಾ: ಅಭಿವೃದ್ಧಿ ಹೊಂದಲು ಯೋಜನೆಗಳು ಬೇಕು ಆದರೆ ಮೀನುಗಾರರ ಸಮಾಧಿಯ ಮೇಲೆ ಮಾಡುವ ಅಭಿವೃದ್ಧಿಯ ಅವಶ್ಯಕತೆ ನಮಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಹೇಳಿದರು.

ಅವರು ಪಟ್ಟಣದ ಕೋಟೆವಾಡದ ನಾಮಧಾರಿ ನೌಕರರ ಸಂಘದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕೇಣಿ ಬಂದರು ವಿರೋಧಿ ಸಮಿತಿ ಮತ್ತು ತಾಲೂಕಿನ ಜನತೆಯ ಸಮಾಲೋಚನೆ ಸಭೆಯಲ್ಲಿ ಮಾತನಾಡಿ ಕೇಣಿ ವಾಣಿಜ್ಯ ಬಂದರು ನಿರ್ಮಾಣದಿಂದ ಕೇವಲ ಮೀನುಗಾರರಿಗೆ ಅಷ್ಟೇ ತೊಂದರೆಯಾಗದೆ ಅಂಕೋಲದ ಕೆಲವು ಪ್ರದೇಶದ ಹಲವಾರು ಸಮುದಾಯದವರಿಗೆ ತೊಂದರೆಯಾಗಲಿದ್ದು, ಈ ಹೋರಾಟ ಮೀನುಗಾರರಷ್ಟೇ ಅಲ್ಲದೆ ಈ ಬಂದರು ಕಾಮಗಾರಿ ತಾಲೂಕಿಗೆ ಮುಂಬರುವ ದೊಡ್ಡ ಕುತ್ತೆಂದು ಬಾವಿಸಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಮಾತ್ರ ಬಂದರು ಕಾಮಗಾರಿಯನ್ನು ತಡೆಗಟ್ಟಲು ಸಾದ್ಯ ಎಂದರು.

ಕೇಣಿಯ ಗ್ರೀನ್ ಫೀಲ್ಡ್ ವಾಣಿಜ್ಯ ಬಂದರು ಕೇವಲ ಮೀನುಗಾರ ಸಮುದಾಯಕ್ಕೆ ಅಷ್ಟೇ ಮಾರಕವಾಗದೆ,ಬಂದರು ಸಂಪರ್ಕಿಸುವ ದೊಡ್ಡದಾದ ರಸ್ತೆಗಳಿಂದ ಹಲವಾರು ಸಮುದಾಯದವರಿಗೆ ಕುಂದುಂಟುಮಾಡಲಿದೆ,ಈ ಬಗ್ಗೆ ತಕ್ಷಣ ಜನರು ಎಚ್ಚೆತ್ತುಕೊಂಡು ಹೋರಾಟಕ್ಕಿಳಿದರೆ ಮಾತ್ರ ಬಂದರು ಕಾಮಗಾರಿಯನ್ನು ನಿಲ್ಲಿಸಲು ಸಾಧ್ಯ. ಕಂಪನಿ ಕೇವಲ ಪ್ರಾಥಮಿಕ ಸರ್ವೆ ನಡೆಸುವುದಾಗಿ ಹೇಳಲಾಗುತ್ತಿದ್ದು.

ಗುತ್ತಿಗೆ ತೆಗೆದುಕೊಂಡ ಕಂಪನಿ ಜನರ ಮುಂದೆ ಬಾರದೆ,ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಗಳಿಂದ ಜಮೀನು ಖರೀದಿಗೆ ಮುಂದಾಗಿದ್ದು, ಗುತ್ತಿಗೆ ಕಂಪನಿ ಖಾಸಗಿ ವ್ಯಕ್ತಿಯೋರ್ವರಿಂದ ಕೋಟ್ಯಾಂತರ ರೂಪಾಯಿ ಜಮೀನು ಖರೀದಿ ವ್ಯವಹಾರ ನಡೆಸಿದ್ದು ಯಾಕೆ? ನೇರವಾಗಿ ಜನರ ಬಳಿಯೇ ಬಂದು ಅವರ ಕಷ್ಟ ಸುಖ ವಿಚಾರಿಸಿ ಜಾಗ ಖರೀದಿಸಬಹುದಿತ್ತಲ್ಲವೇ,ಈ ಜಮೀನು ಖರೀದಿ ವ್ಯವಹಾರದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿಯೋರ್ವರು ಸಂಪೂರ್ಣವಾಗಿ ತೋಡಗಿಸಿಕೊಂಡಿದ್ದು, ಕಂಪನಿಯು ಬಂದರು ಕಾಮಗಾರಿಗೆ ಕಾಲಿಡುತ್ತಲೇ ಖಾಸಗಿ ವ್ಯಕ್ತಿಯೊಂದಿಗೆ ಕೋಟಿಗಟ್ಟಲೆ ವ್ಯವಹಾರ ನಡೆಸಿ ಹಲವಾರು ಸ್ಥಳೀಯ ಅಮಾಯಕ ಯುವಕರ ಖಾತೆಗೆ ಹಣ ವರ್ಗಾವಣೆ ಮಾಡಿ ಅವರು ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ ಎಂದರು.

ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು,ನಾವೆಲ್ಲ ಒಂದಾಗಿ ಹೋರಾಟ ಮಾಡಬೇಕಾಗಿದೆ,ಬಂದರು ವಿರೋಧ ಹೋರಾಟ ಸಮಿತಿಗೆ ನನ್ನ ಸಂಪೂರ್ಣ ಬೆಂಬಲವಿದೆ,ಈ ಹೋರಾಟದ ಖರ್ಚು ವೆಚ್ಚಗಳನ್ನು ಭರಿಸಲು ಹಲವು ಗಣ್ಯರು ಮುಂದೆ ಬರಲಿದ್ದು,ಪ್ರಪ್ರಥಮವಾಗಿ ನಾನೇ ಒಂದು ಲಕ್ಷ ರೂಪಾಯಿ ನೀಡುತ್ತೇನೆ ಎಂದು ಹೋರಾಟಗಾರರಿಗೆ ಧೈರ್ಯ ತುಂಬಿದರು.


Leave a Reply