ಸರ್ವಾಧಿಕಾರಿ ಧೋರಣೆ ಹಿನ್ನೆಲೆ!ಪುರಸಭೆ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ವರ್ಗಾಯಿಸುವಂತೆ ಸದಸ್ಯರ ಪಟ್ಟು.

Spread the love

ಅಂಕೋಲಾ: ಒಂದಲ್ಲಾ ಒಂದು ಗೊಂದಲದಿಂದ ಕೂಡಿದ್ದ ಅಂಕೋಲಾ ಪುರಸಭೆಯಲ್ಲಿ ಮತ್ತೊಂದು ಗಲಾಟೆ ಬುಗಿಲೆದ್ದಿದ್ದು,ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ವರ್ಗಾವಣೆ ಮಾಡುವಂತೆ ಸರ್ವಪಕ್ಷದ 18 ಸದಸ್ಯರು ಬಿಗಿಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ.

ಮುಖ್ಯಾಧಿಕಾರಿ ಹಾಗೂ ಕಿರಿಯ ಇಂಜಿನಿಯರ್ ಅವರ ಸರ್ವಾಧಿಕಾರಿ ದೊರಣೆ ಮತ್ತು ಕಾಮಗಾರಿಯ ಆರಂಭ ಮತ್ತು ಮುಕ್ತಾಯದ ಹಂತದಲ್ಲಿ ಸದಸ್ಯರ ಗಮನಕ್ಕೆ ತರದೆ, ಸದಸ್ಯರ ಆಕ್ಷೇಪಣೆ ನಡುವೆಯೂ ಬಿಲ್ ಮಾಡಿರುವುದು ಆಡಳಿತ ಮಂಡಳಿಯ ವಿರೋಧಕ್ಕೆ ಕಾರಣವಾಗಿದ್ದು, ಇದರಿಂದ ಬೇಸತ್ತು ಅಂಕೋಲಾ ಪುರಸಭೆಯ 23 ಸದಸ್ಯರ ಪೈಕಿ 18 ಸದಸ್ಯರ ಸರ್ವಪಕ್ಷ ನಿಯೋಗ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರರನ್ನು ವರ್ಗಾವಣೆ ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಪೌರಾಡಳಿತ ನಿರ್ದೇಶಕರಾದ ಪ್ರಭುಲಿಂಗ ಕವಳಿಕಟ್ಟಿಯವರಿಗೆ ಮನವಿ ಮಾಡಿದ್ದರು, ಈ ಕುರಿತು ತಕ್ಷಣ ಕಾರ್ಯಪ್ರವೃತ್ತರಾದ ಅವರು ಅರ್ಜಿಯ ವಿಚಾರಣೆಗೆ ಉತ್ತರ ಕನ್ನಡ ಜಿಲ್ಲಾ ಯೋಜನಾಧಿಕಾರಿಗಳಿಗೆ ಪರಿಶೀಲಿಸಿ ತಕ್ಷಣ ವರದಿನೀಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಆಗಮಿಸಿದ ಉತ್ತರ ಕನ್ನಡ ಜಿಲ್ಲಾ ಯೋಜನಾಧಿಕಾರಿ ಸರ್ವಪಕ್ಷದ ಸದಸ್ಯರನ್ನು ಕರೆದು ಅರ್ಜಿಯನ್ನು ವಿಚಾರಿಸಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರರಾದ ಶಲ್ಜಾ ನಾಯ್ಕ ಪುರಸಭೆಯಲ್ಲಿ ಸರ್ವಾಧಿಕಾರಿ ದೊರಣೆ ಹಾಗೂ ಆಡಳಿತ ಮಂಡಳಿಯನ್ನು ಕಡೆಗಣಿಸಿರುವುದರ ಬಗ್ಗೆ ಪುರಾವೆ ಸಹಿತ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷೆ ಸಹಿತ ಒಟ್ಟಾರೆ 18 ಮಂದಿ ಸರ್ವಪಕ್ಷ ಸದಸ್ಯರು ಯೋಜನಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಈ ಕುರಿತು ತಕ್ಷಣ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಛೇರಿಯಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ ಎನ್ನಲಾಗಿದೆ.

ಪುರಸಭೆ ವ್ಯಾಪ್ತಿಯ ಎಸ್ ಎನ್ ಟಿ ಯಿಂದ   ಹಿಂದೂ ಸ್ಮಶಾನ ಭೂಮಿಗೆ ತೆರಳುವ ರಸ್ತೆಯನ್ನು ಆಡಳಿತ ಮಂಡಳಿಯ ಗಮನಕ್ಕೂ ತರದೆ, ಸ್ಮಶಾನವನ್ನು ಇಬ್ಬಾಗವಾಗುವ ರೀತಿಯಲ್ಲಿ ಮಾಡಿರುವುದನ್ನು ಖಂಡಿಸಿ ಸರ್ವಪಕ್ಷ ನಿಯೋಗ  ಪೌರಾಡಳಿತ ನಿರ್ದೇಶಕರಾದ ಪ್ರಭುಲಿಂಗ ಕವಳಿಕಟ್ಟಿಯವರಿಗೆ ಅರ್ಜಿ ಸಲ್ಲಿಸಿದ್ದು ಈ ಕುರಿತು ಪರಿಶೀಲನೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು ಎನ್ನಲಾಗಿದೆ.

Leave a Reply

Your email address will not be published. Required fields are marked *