ಶಿರಸಿ: ವಾಹನವೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಜಾಲವನ್ನು ಬೇಧಿಸಿರುವ ಬನವಾಸಿ ಪೊಲೀಸರು, ಮಹೀಂದ್ರ ಸುಪ್ರೊ ವಾಹನವನ್ನು ಜಪ್ತಿ ಮಾಡಿ ಅಂದಾಜು 17 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ನಿನ್ನೆ ತಡರಾತ್ರಿ ಬನವಾಸಿಯಲ್ಲಿ ನಡೆದಿದೆ.
ತಡರಾತ್ರಿ ಕಾರ್ಯಾಚರಣೆ
ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತಪ್ಪ ಕುಂಬಾರ್ ಹಾಗೂ ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬನವಾಸಿಯ ದಾಸನಕೊಪ್ಪ ಕ್ರಾಸ್ ಬಳಿ ವಾಹನವನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ವಾಹನ ಚಾಲಕ ಸಚಿನ್ ನಾಗರಾಜ ಗೌಡ ಎಂಬಾತ ಶಿರಸಿಯ ಕೊರಲಕಟ್ಟ ಪ್ರದೇಶದಿಂದ ಈ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ವಾಹನ ಮತ್ತು ಅಕ್ಕಿಯನ್ನು ಜಪ್ತಿ ಮಾಡಿರುವ ಪೊಲೀಸರು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಧಿಕಾರಿಗಳ ಭೇಟಿ
ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಪತ್ತೆಯಾದ ಹಿನ್ನೆಲೆಯಲ್ಲಿ, ಶಿರಸಿ ಆಹಾರ ಇಲಾಖೆಯ ಶಿರಸ್ತೇದಾರ್ ಶ್ರೀಮತಿ ವೀಣಾ ಹಾಗೂ ಆರೋಗ್ಯ ನಿರೀಕ್ಷಕಿ ಕವಿತಾ ಪಾಟನ್ಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾನೂನು ಪ್ರಕಾರ ಮುಂದಿನ ಅಗತ್ಯ ಕ್ರಮಗಳನ್ನು ಜರುಗಿಸಿದ್ದಾರೆ.
