ಬೆಂಗಳೂರು:ಆಪರೇಷನ್ ಸಿಂಧೂರದ ಭಾಗವಾಗಿರುವ ಕನ್ನಡ ನೆಲದಲ್ಲಿ ಉತ್ಪಾದಿಸಲಾದ ‘ಸ್ಕೈ ಸ್ಟ್ರೈಕರ್’ ಆತ್ಮಾಹುತಿ ಡ್ರೋನ್ ಪಾಕಿಸ್ತಾನದ ಮೇಲೆರಗಿ ಉಗ್ರರ ನೆಲೆಗಳನ್ನು ಸೆದೆಬಡಿಯುತ್ತಿದ್ದರೆ, ಇನ್ನೊಂದೆಡೆ ಪಾಕ್ ಕಡೆಯಿಂದ ಹಾರಿ ಬರುತ್ತಿರುವ ವೈರಿ ಕ್ಷಿಪಣಿಗಳನ್ನು ತಡೆಯುತ್ತಿರುವಲ್ಲಿ, ಸ್ವದೇಶಿ ಆಕಾಶ್ ವಾಯು ರಕ್ಷಣಾ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ.

ಹೌದು… ಇಂಡೋ-ಪಾಕ್ ಗಡಿಯಲ್ಲಿ ಉದ್ವಿಗ್ನದ ಸ್ಥಿತಿ ಆರಂಭವಾದ ಹಿನ್ನೆಲೆಯಲ್ಲಿ ಪಾಪಿ ಪಾಕಿಸ್ತಾನದ ಉಗ್ರರ ನೆಲೆಯನ್ನು ಗುರಿಯಾಗಿಸಿ ಭಾರತೀಯ ಸೇನೆ ಸಮರ್ಥವಾಗಿ ದಾಳಿ ನಡೆಸುತ್ತಿದೆ.ಹಾಗೆಯೇ ಉಗ್ರ ಪೋಷಕ ಪಾಕಿಸ್ತಾನ ಭಾರತದ ಮೇಲೆ ನಡೆಸುತ್ತಿರುವ ಕ್ಷಿಪಣಿ ದಾಳಿಯನ್ನು ಗಗನದಲ್ಲೇ ಹೊಡೆದುರುಳಿಸುವ ಮೂಲಕ ಬೆಂಗಳೂರಿನಲ್ಲೇ ತಯಾರಾದ ಆಕಾಶ್ ಕ್ಷಿಪಣಿಗಳು ಭಾರತೀಯ ಸೈನ್ಯಕ್ಕೆ ನೆರವಾಗುತ್ತಿದೆ.

ಇದನ್ನು ಬೆಂಗಳೂರು ಮೂಲದ ವಿಜ್ಞಾನಿಯೊಬ್ಬರು ಅಭಿವೃದ್ಧಿಪಡಿಸಿರುವುದು ಹೆಮ್ಮೆಯ ವಿಷಯವಾಗಿದೆ.ಪದ್ಮಶ್ರೀ ಪುರಸ್ಕೃತ ಡಾ. ಪ್ರಹ್ಲಾದ್ ರಾಮ ರಾವ್ (78) ಅವರು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಯಲ್ಲಿ (ಡಿಆರ್‌ಡಿಒ) ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಆಕಾಶ್ ಯೋಜನೆಯ ಅತಿ ಕಿರಿಯ ಯೋಜನಾ ನಿರ್ದೇಶಕರಾಗಿದ್ದರು. ಇವರಿಗೆ ಭಾರತದ ಕ್ಷಿಪಣಿ ಮನುಷ್ಯ ಎಂದೇ ಖ್ಯಾತರಾಗಿರುವ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರೇ ಈ ಜವಾಬ್ದಾರಿ ವಹಿಸಿದ್ದರು ಎನ್ನುವುದು ವಿಶೇಷ. ಹೈದರಾಬಾದ್‌ನಲ್ಲಿರುವ ಭಾರತ್ ಡೈನಾಮಿಕ್ಸ್ ಲಿ.ನಲ್ಲಿ ಉತ್ಪಾದನೆಯಾಗುತ್ತಿರುವ ಆಕಾಶ್ ವ್ಯವಸ್ಥೆಯನ್ನು 15 ವರ್ಷದ ಸತತ ಪರಿಶ್ರಮದಿಂದ ಅಭಿವೃದ್ಧಿಪಡಿಸಲಾಗಿದೆ.


Leave a Reply