ಉಡುಪಿ: ಇಂಡೋ-ಪಾಕ್ ಗಡಿಯಲ್ಲಿ ಉದ್ವಿಗ್ನದ ಸ್ಥಿತಿ ಆರಂಭವಾಗುತ್ತಿದ್ದಂತೆಯೇ ಭಾರತೀಯರೆಲ್ಲರು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ,ಕೆಲವರು ನಮ್ಮ ಸೈನ್ಯಕ್ಕೆ ಮತ್ತಷ್ಟು ಶಕ್ತಿ ನೀಡಲಿ ಎಂದು ದೇವರ ಮೊರೆಹೋಗುತ್ತಿದ್ದರೆ,ಇನ್ನು ಕೆಲವರು ತಮ್ಮ ಕೈಲಾದಷ್ಟು ಸಹಾಯವನ್ನು ಸೇನೆಯ ಅಧಿಕೃತ ಖಾತೆಗೆ ಹಣ ಜಮಾವಣೆ ಮಾಡುತ್ತಿದ್ದಾರೆ.ಅದರಂತೆಯೇ ಕರ್ನಾಟಕದ ಕರಾವಳಿ ಜಿಲ್ಲೆಯೊಂದು ಗ್ರಾಮ ಪಂಚಾಯಿತಿ ಬಜೆಟ್ ಮೀಟಿಂಗ್ ನಲ್ಲಿ ತನ್ನ ಅಭಿವೃದ್ಧಿಗೆ ಬಳಸಬೇಕಾಗಿದ್ದ ಹಣವನ್ನು ಸೈನ್ಯಕ್ಕೆ ನೀಡಿರುವುದು ಇಲ್ಲಿಯ ಜನರ ದೇಶಪ್ರೇಮಕ್ಕೆ ಸಾಕ್ಷಿಯಾಗಿದೆ.

ಹೌದು…ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಮಜೂರು ಗ್ರಾಮ ಪಂಚಾಯಿತಿಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಭಾರತೀಯ ಸೇನೆಗೆ ₹10 ಲಕ್ಷ ಮೊತ್ತವನ್ನು ಮೀಸಲಿಡಲು ತೀರ್ಮಾನಿಸಲಾಯಿತು.

ಭಾರತ-ಪಾಕಿಸ್ತಾನ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನಿಸಿ ರಾಷ್ಟ್ರ ಮತ್ತು ಸೈನಿಕರ ಹಿತಕ್ಕಾಗಿ ಸರ್ವ ಸದಸ್ಯರ ಒಪ್ಪಿಗೆ ಪಡೆದು ಈ ಮೊತ್ತವನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷ
ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತವು ಅವರ ಅಡಗುತಾಣಗಳನ್ನು ದ್ವಂಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ,ಭಾರತಿಯರೆಲ್ಲರು ಈ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ಉಪಾಧ್ಯಕ್ಷೆ ಮಂಜುಳಾ ಆಚಾರ್ಯ ಮಾತನಾಡಿ ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಡುತ್ತಿರುವ ಭಾರತೀಯ ಸೈನ್ಯದ ಕಾರ್ಯವೈಖರಿ ಮೈನವಿರೇಳಿಸುವಂತಿದೆ, ಸಿಂಧೂರ ಆಪರೇಷನ್ ನಲ್ಲಿ ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಪಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಕಾರ್ಯಕ್ಷಮತೆಗೆ ಮಹಿಳೆಯರ ಗರ್ವ ಹೆಚ್ಚಿಸುವಂತಾಗಿದೆ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ‘ದೇಶಕ್ಕೆ ಆಪತ್ತು ಎದುರಾದಾಗ ಪ್ರತಿಯೊಬ್ಬ ನಾಗರಿಕ ಸೈನ್ಯದ ಜೊತೆ ಕೈಜೋಡಿಸಬೇಕು. ಮಜೂರು ಗ್ರಾಮ ಪಂಚಾಯಿತಿ ತೆಗೆದುಕೊಂಡ ನಿರ್ಧಾರ ದೇಶದಲ್ಲೇ ಪ್ರಥಮ ಹಾಗೂ ಪ್ರೇರಣಾದಾಯಕ ಎಂದರು.


Leave a Reply