ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದಿರುವ ಹಿನ್ನೆಲೆಯಲ್ಲಿ ವಿಜಯನಗರದ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 20ರಂದು ʼಪ್ರಗತಿಯತ್ತ ಕರ್ನಾಟಕ- ಸಮಪರ್ಣೆ ಸಂಕಲ್ಪʼ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ಮಾಡಿದ್ದು, ಈ ಜಾಹೀರಾತು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಸಾಮಾನ್ಯವಾಗಿ ಸರ್ಕಾರಿ ಜಾಹೀರಾತುಗಳು ಅಂತಂದ್ರೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಫೊಟೊ, ಕಾರ್ಯಕ್ರಮದ ಮಾಹಿತಿಗಳನ್ನು ಒಳಗೊಂಡಿರುತ್ತವೆ. ಸಾಂಪ್ರದಾಯಿಕವಾಗಿ ಇಂಥ ಜಾಹೀರಾತುಗಳು ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುತ್ತದೆ. ಆದರೆ, ಇಂದು ʼಗ್ಯಾರಂಟಿ ಬದುಕುʼ ಹೆಸರಿನಲ್ಲಿ ಪ್ರಕಟಗೊಂಡಿರುವ ಜಾಹೀರಾತು ಎಲ್ಲರ ಗಮನ ಸೆಳೆಯುತ್ತಿದೆ.
ಅಂಥದ್ದೇನಿದೆ?: ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಪ್ರಕಟಗೊಂಡಿರುವ ಇಂದಿನ ಜಾಹೀರಾತುವಿನಲ್ಲಿ ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಫೊಟೊ ಇದ್ದು, ಜೊತೆಗೆ ಕರ್ನಾಟಕದ ನಕಾಶೆ ಇದೆ. ಈ ನಕಾಶೆಯೊಳಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಫೊಟೊಗಳನ್ನು ಅವರ ಹೆಸರಿನೊಂದಿಗೆ ಬಳಸಿಕೊಳ್ಳಲಾಗಿದೆ.
ಇದರಲ್ಲಿ ಪ್ರಮುಖವಾಗಿ ಫಲಾನುಭವಿಗಳ ಪಕ್ಕದಲ್ಲಿ ಕ್ಯೂಆರ್ ಕೋಡ್‌ಗಳನ್ನು ನೀಡಲಾಗಿದ್ದು, ಈ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದಲ್ಲಿ ನೇರವಾಗಿ ಕರ್ನಾಟಕ ವಾರ್ತೆಯ ಯೂಟ್ಯೂಬ್ ಚಾನೆಲ್ ತೆರೆದುಕೊಂಡು, ಗ್ಯಾರಂಟಿಗಳಿಂದ ಪ್ರಯೋಜನ ಪಡೆದ ಫಲಾನುಭವಿಗಳ ಅನಿಸಿಕೆಯ ವಿಡಿಯೋ ಪ್ಲೇ ಆಗಲಿದೆ. ಐವರು ಫಲಾನುಭವಿಗಳ ಯಶೋಗಾಥೆಯನ್ನು ಇಲ್ಲಿ ಕ್ಯೂಆರ್ ಕೋಡ್ ಮೂಲಕ ಪ್ರಸ್ತುತಪಡಿಸಲಾಗಿದ್ದು, ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿ ಯೋಜನೆಗಳ ಕುರಿತಾಗಿ ಸಾಹಿತ್ಯಿಕವಾಗಿ ಮಾತನಾಡಿರುವ ಧ್ವನಿ ಸಂದೇಶವನ್ನೂ ನೀಡಲಾಗಿದೆ.
ಈ ಎಲ್ಲಾ ಫಲಾನುಭವಿಗಳು ರಾಜ್ಯದ ವಿವಿಧೆಡೆಯವರಾಗಿದ್ದು, ಗ್ಯಾರಂಟಿ ಯೋಜನೆಗಳು ಹೇಗೆ ನೆರವಾಗಿದೆ ಎನ್ನುವುದನ್ನು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಸಿದ್ದರಾಮಯ್ಯನವರಿಗೆ ಫಲಾನುಭವಿಗಳು ಧನ್ಯವಾದ ತಿಳಿಸಿದ್ದಾರೆ. ವಾರ್ತಾ ಇಲಾಖೆಯ ಈ ಜಾಹೀರಾತು ಸದ್ಯ ಎಲ್ಲರ ಕಣ್ಮನ ಸೆಳೆದಿದ್ದು, ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕೆ ಇಲಾಖೆ ನಡೆಸಿರುವ ಈ ವಿಶೇಷ ಪ್ರಯತ್ನಕ್ಕೆ ಎಲ್ಲರ ಮೆಚ್ಚುಗೆಯೂ ವ್ಯಕ್ತವಾಗಿದೆ.
ಸಿದ್ದರಾಮಯ್ಯನವರ ಧ್ವನಿ ಸಂದೇಶದಲ್ಲಿ ಏನಿದೆ?:
‘ನಮ್ಮ ಐದು ವಾಗ್ದಾನಗಳು ಕೇವಲ ಮಾತಲ್ಲ,
ಬದಲಾವಣೆಯ ಮಂತ್ರ.
ಶಕ್ತಿಯಿಂದ ಹೆಣ್ಣುಮಕ್ಕಳು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ,
ತಮ್ಮ ಕನಸುಗಳ ಬೆನ್ನೇರಿ ಸಾಗುತ್ತಿದ್ದಾರೆ.
ಅನ್ನಭಾಗ್ಯದಿಂದ ಹಸಿವಿನ ಚಿಂತೆ ದೂರವಾಗಿದೆ,
ಎಲ್ಲರೂ ನೆಮ್ಮದಿಯಿಂದ ಮೂರ್ಹೊತ್ತು ಉಣ್ಣುತ್ತಿದ್ದಾರೆ.
ಗೃಹಜ್ಯೋತಿಯಿಂದ ಬಡವರ ಮನೆ ಬೆಳಗುತ್ತಿದೆ,
ಕರೆಂಟ್ ಬಿಲ್ ಎಂಬ ಆರ್ಥಿಕ ಹೊರೆ ಇಳಿದಿದೆ.
ಗೃಹಲಕ್ಷ್ಮಿಯಿಂದ ಮನೆಯೊಡತಿಯ ಕೈ ಬಲಗೊಂಡಿದೆ,
ಕುಟುಂಬದ ನಿರ್ವಹಣೆಗೆ ಆರ್ಥಿಕ ಶಕ್ತಿ ಪಡೆದಿದ್ದಾಳೆ.
ಯುವನಿಧಿಯಿಂದ ಯುವಜನರಲ್ಲಿ ಕನಸುಗಳು ಚಿಗಿರೊಡೆದಿದೆ,
ಉದ್ಯೋಗದ ಬಾಗಿಲು ತೆರೆದಿದೆ.
ಇವು ನಮ್ಮ ಹೆಮ್ಮೆಯ ಯೋಜನೆಗಳು,
ಕರುನಾಡಿನ ಪ್ರತಿಯೊಬ್ಬರ ಬದುಕಿನಲ್ಲಿಯೂ ಬದಲಾವಣೆ ತಂದ ನಮ್ಮ ಗ್ಯಾರಂಟಿಗಳು;
ಇದುವೇ ಗ್ಯಾರಂಟಿ ಬದುಕು’ ಎಂದು ಸಿಎಂ ಸಿದ್ದರಾಮಯ್ಯನವರು ಧ್ವನಿ ಸಂದೇಶದಲ್ಲಿ ತಿಳಿಸಿದ್ದಾರೆ.
ಶಕ್ತಿ ಯೋಜನೆಯ ಕುರಿತು: ಶಕ್ತಿ ಯೋಜನೆಯು ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಒಂದಾಗಿದ್ದು, ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ. ಈವರೆಗೆ ನಾಡಿನ ಮಹಿಳೆಯರು ಶಕ್ತಿ ಯೋಜನೆಯಡಿ 455 ಕೋಟಿಗೂ ಅಧಿಕ ಉಚಿತ ಪ್ರಯಾಣ ಮಾಡಿದ್ದು, 11,403 ಕೋಟಿ ರೂ.ಗಳನ್ನು ಈವರೆಗೆ ಸರ್ಕಾರ ಇದಕ್ಕಾಗಿ ವ್ಯಯಿಸಿದೆ.
Leave a Reply