ದಾಂಡೇಲಿ: ಕನ್ನಡ ಎನ್ನುವುದೇ ಒಂದು ಭಾವೈಕ್ಯತೆಯ ಪ್ರತೀಕ. ಕನ್ನಡ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುತ್ತದೆ. ಇಂಥಹ ಸಾಮರಸ್ಯದ ಕನ್ನಡ ಹಾಗೂ ಕನ್ನಡಿಗರ ಮಾತೃಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಇದು ಎಲ್ಲ ಕನ್ನಡಿಗರನ್ನು ಒಂದಾಗಿಸುವ ಮಹಾಮನೆಯಾಗಿದೆ ಎಂದು ಕಾರವಾರದ ಹಿರಿಯ ಲೇಖಕಿ ಪ್ರೇಮಾ ಟಿ.ಎಮ್.ಆರ್ ಹೇಳಿದರು.

ಅವರು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಂಕೋಲಾ ತಾಲೂಕು ಕಸಾಪ ಘಟಕ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 111 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಅಂದರೆ ಬರೀ ಭಾಷೆಯಲ್ಲ. ಕೇವಲ ಬರಹವಷ್ಟೇ ಅಲ್ಲ. ಪುಸ್ತಕವಷ್ಟೇ ಅಲ್ಲ. ಬದುಕಿನ ಭಾಗವಷ್ಟೇ ಅಲ್ಲ. ಅದರೆ ನಮ್ಮ ಬದುಕೇ ಕನ್ನಡವಾಗಿದೆ. ಆಗಬೇಕು. ನಾವು ಪುಸ್ತಕ ಬರೆದರೆ ಸಾಲದು. ಕನ್ನಡವನ್ನ ಹಾಗೂ ಪರಿಷತ್ತನ್ನು ಕಟ್ಟುವ ಕೆಲಸದಲ್ಲಿಯೂ ಬರಹಗಾರರು ತೊಡಗಿಸಿಕೊಳ್ಳ ಬೇಕು. ಖುರ್ಚಿಯೊಂದೇ ನಮಗೆ ಗೌರವ ತಂದು ಕೊಡುವುದಿಲ್ಲ. ನುಡಿ ಸಂಘಟನೆ ಹಾಗೂ ಸೇವೆ ಕೂಡಾ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಅದಕ್ಕೆ ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆಯವರೇ ಒಂದು ನಿದರ್ಶನವಾಗಿದ್ದಾರೆ. ಅವರ ಸಾರಥ್ಯದಲ್ಲಿ ಜಿಲ್ಲೆಯ ಸಾಹಿತ್ಯ ಪರಿಷತ್ತು ಸಾಮಾಜಿಕ ನ್ಯಾಯದಡಿಯಲ್ಲಿ ಕೆಲಸ ಮಾಡುತ್ತಿದೆ. ತೆರೆಯ ಮರೆಯಲ್ಲಿರುವವರನ್ನು ಕರೆದು ಗೌರವಿಸುತ್ತಿದೆ. ಮಹಿಳೆಯರಿಗೂ ಸಮ್ಮೇಳನಾಧ್ಯಕ್ಷತೆಯ ಗೌರವ ನೀಡಲಾಗುತ್ತಿದೆ ಎಂದು ಹೇಳಿ ಆಂಕೋಲೆ ಇಂದು ಸ್ವಾತಂತ್ರ್ಯ , ಸಮಾನತೆ ಹಾಗೂ ಸಾಮಾಜಿಕ ಬಾಂದವ್ಯದ ನೆಲವಾಗಿದೆ ಎಂದರು.

ಸರಕಾರಿ ನೌಕರರ ಸಂಘದ ಅಧ್ಯಕ್ಷ , ನುಡಿ ಚಿಂತಕ ಬಾಲಚಂದ್ರ ನಾಯಕ ‘ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು’, ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.ಜನಸಾಮಾನ್ಯರು ಎಲ್ಲಿಯವರೆಗೆ ತೊಡಗಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಯಾವ ಯೋಜನೆಗಳೂ, ಯೋಚನೆಗಳೂ ಯಶಸ್ಸು ಕಾಣಲು ಸಾಧ್ಯವಿಲ್ಲ. ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಈಗಾಗಲೇ ಎಲ್ಲರನ್ನು ಒಳಗೊಳ್ಳುತ್ತ ಜನಸಾಮಾನ್ಯರನ್ನು ತಲುಪುವ ಕೆಲಸ ಹಾಗೂ ಕಾರ್ಯಕ್ರಮ ಮಾಡುತ್ತಿದೆ. ಜಿಲ್ಲೆಯ ಕಸಾಪ ಕೆಲಕಾಲ ನಿಂತ ನೀರಾಗಿತ್ತು. ಆದರೆ ಈಗ ವಾಸರೆಯವರ ಕ್ರಿಯಾಶೀಲತೆಯಿಂದಾಗಿ ಪ್ರವಹಿಸುತ್ತಿದೆ. ನಾವು ಅತಿಥಿಗಳಾಗುವ ಜೊತೆಗೆ ಪ್ರೇಕ್ಷಕರೂ ಆಗಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಕೆನರಾ ವೆಲ್ಪರ್ ಟ್ರಸ್ಟಿನ ಆಡಳಿತಾಧಿಕಾರಿ ರವೀಂದ್ರ ಕೇಣಿ, ಅಂಕೋಲಾ ತಾಲೂಕು ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಸಾಂದರ್ಭಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಾಹಿತ್ಯ ಪರಿಷತ್ತನ್ನು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ, ಸರ್ ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಲ ಈ ನಾಡಿನ ಪ್ರಾಥಸ್ಮರಣೀಯರಾಗಿದ್ದಾರೆ. ಅವರ ಮಹತ್ವಾಕಾಂಕ್ಷೆಯ ಸಂಸ್ಥೆ ಇಂದು ಶತಮಾನಗಳ ಇತಿಹಾಸದೊಂದಿಗೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪರಿಷತ್ತು ಯಾವೊಬ್ಬ ವ್ಯಕ್ತಿಯ, ಸಮುದಾಯದ ಸಂಸ್ಥೆಯಲ್ಲ. ಇದು ಪ್ರತಿಯೊಬ್ಬ ಕನ್ನಡಿಗರ ಅಸ್ಮಿತೆಯಾಗಿದೆ. ಪ್ರತಿಯೊಬ್ಬನ ಅಭಿಮಾನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬಾಲಚಂದ್ರ ನಾಯಕರಿಗೆ ಗೌರವ ಸಮರ್ಪಿಸಿದರು. ಆನ್ ಲೈನ್ ರಸಪ್ರಶ್ನೆ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಲೇಖಕ ಜೆ.ಪ್ರೇಮಾನಂದ ಬಹುಮಾನಿತರ ಯಾದಿ ವಾಚಿಸಿದರು.

ಹಿರಿಯ ಲೇಖಕ ಜಿ.ಆರ್. ನಾಯಕ ಕನ್ನಡದ ಗೀತೆ ಹಾಡಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಜಿಲ್ಲಾ ಸಮಿತಿ ಸದಸ್ಯ ಜಯಶೀಲ ಆಗೇರ ವಂದಿಸಿದರು. ಲೇಖಕ ಮಹಾಂತೇಶ ರೇವಡಿ ನಿರೂಪಿಸಿದರು.
ಹಿರಿಯ ಸಾಹಿತಿಗಳಾದ ಮೋಹನ ಹಬ್ಬು, ವಿಠ್ಠಲ ಗಾಂವಕರ, ನಾಗೇಂದ್ರ ತೊರ್ಕೆ, ನಾಗೇಶ ಅಂಕೋಲೇಕರ, ಶ್ರೀಧರ ನಾಯಕ, ಶ್ಯಾಮಸುಂದರ ಗೌಡ, ಜನಾರ್ಧನ ನಾಯಕ , ಸಂದೀಪ ನಾಯಲ, ಪಾಲ್ಗುಣ ಗೌಡ , ರಫಿಕ್ ಶೇಖ್ ಮುಂತಾದವರಿದ್ದರು.


Leave a Reply