ಅಂಕೋಲಾ: ತಾಲೂಕಿನ ಕೊಡ್ಲಗದ್ದೆ ಭಾಗಕ್ಕೆ ಅವಧಿ ಮೀರಿದ ಗ್ಯಾಸ್ ಸಿಲೆಂಡರ್ ಸರಬರಾಜು ಆಗುತ್ತಿರುವ ಆರೋಪ ಕೇಳಿ ಬಂದಿದ್ದು, ಜೊತೆಗೆ ಗ್ಯಾಸ್ ಸಿಲೆಂಡರ್ ತೂಕದಲ್ಲಿಯೂ ವ್ಯತ್ಯಾಸವಿರುವ ಬಗ್ಗೆ ತಿಳಿದ ಗ್ರಾಹಕ ಜಿಲ್ಲಾಧಿಕಾರಿ ಮೊರೆಹೋಗಿದ್ದಾರೆ.

ಹೌದು….ತಾಲೂಕಿನ ಅಡುಗೆ ಅನಿಲ ವಿತರಕರಾದ ‘ಮಾನು ಇಂಡೇನ್’ ಎಂಬ ವಿತರಕರ ಮೂಲಕ ತಾಲೂಕಿನ ಕೊಡ್ಲಗದ್ದೆ ಭಾಗಕ್ಕೆ ಅಡುಗೆ ಅನಿಲದ ಸಿಲೆಂಡರ್ ಪೂರೈಕೆ ಆಗುತ್ತದೆ. ಪ್ರತಿ ಬುಧವಾರ ಈ ಭಾಗಕ್ಕೆ ಅಡುಗೆ ಅನಿಲ ಹೊತ್ತ ವಾಹನ ಬರುತ್ತದೆ. ಕೊಡ್ಲಗದ್ದೆಯ ಸುಮಂತ ಹೆಗಡೆ ಅವರು ಕಳೆದ ಮಂಗಳವಾರ ಗ್ಯಾಸ್ ಬುಕ್ ಮಾಡಿದ್ದು, ಅವರಿಗೆ ಬುಧವಾರ ಸಿ-25 ಎಂದು ನಮೂದಿಸಿದ ಸಿಲೆಂಡರನ್ನು ವಿತರಿಸಲಾಗಿದೆ. ಸಿ-25 ಅಂದರೆ ಸೆಪ್ಟೆಂಬರ್ ಅಂತ್ಯದವರೆಗೆ ವಾಯಿದೆಯಿರುವ ಸಿಲೆಂಡರ್ ಆಗಿದ್ದು, ಒಂದೆರಡು ತಿಂಗಳ ಅವಧಿಯಲ್ಲಿ ಸಿಲೆಂಡರ್ ಖಾಲಿ ಮಾಡಲು ಆಗದೇ ಇದ್ದರೆ ಅದು ಸ್ಪೋಟಿಸುವ ಆತಂಕವಿದೆ ಎಂಬುದು ಅವರ ಕುಟುಂಬದವರ ಆತಂಕ.
ಈ ಮೊದಲು ಅವಧಿ ಮೀರಿದ ಸಿಲೆಂಡರ್ ವಿತರಣೆ ನಡೆದಿತ್ತು. ಅದಕ್ಕೆ ಆಕ್ಷೆಪಣೆ ಸಲ್ಲಿಸಿದ ಕಾರಣ ಅವಧಿ ಮುಗಿಯಲು ಕೆಲ ತಿಂಗಳು ಬಾಕಿಯಿರುವ ಸಿಲೆಂಡರ್ ಪೂರೈಸಲಾಗುತ್ತಿದೆ’ ಎಂಬುದು ಕೊಡ್ಲಗದ್ದೆಯ ಅನಂತ ಹೆಗಡೆ ಅವರ ದೂರು. ಈ ಬಗ್ಗೆ ಪ್ರಶ್ನಸಿದರೆ ಗ್ಯಾಸ್ ಎಜನ್ಸಿಯವರು ಬೇಕಾದರೆ ತೆಗೆದುಕೊಳ್ಳಿ. ಇಲ್ಲವಾದರೆ ಬಿಡಿ’ ಎಂದು ದಬಾಯಿಸುವ ಬಗ್ಗೆಯೂ ಆ ಭಾಗದ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ.

ಗ್ಯಾಸ್ ಸಿಲೆಂಡರ್ ಮೇಲೆ ಬರೆಯಲಾದ ಮಾಹಿತಿ ಪ್ರಕಾರ ಸಿಲೆಂಡರ್ 30.400 ಕೆಜಿ ತೂಕ ಹೊಂದಿರಬೇಕು. ಆದರೆ, ವಿತರಣೆ ಆದ ಸಿಲೆಂಡರ್ 29.700 ಕೆಜಿ ಮಾತ್ರ ತೂಕವಿದೆ. ಅನೇಕ ಸಲ 1 ಕೆಜಿಗೂ ಅಧಿಕ ವ್ಯತ್ಯಾಸದ ಸಿಲೆಂಡರ್ ಈ ಭಾಗಕ್ಕೆ ಸರಬರಾಜು ಆದ ಉದಾಹರಣೆಗಳಿವೆ. `ಗ್ರಾಹಕರು ಗ್ಯಾಸ್ ಪಡೆಯುವ ಮುನ್ನವೇ ತೂಕವನ್ನು ಪರಿಶೀಲಿಸಬೇಕು. ತೂಕದಲ್ಲಿ ವ್ಯತ್ಯಾಸ ಬಂದ ಬಗ್ಗೆ ವಿಚಾರಿಸಲಾಗುತ್ತದೆ’ ಎಂದು ಇಂಡಿಯನ್ ಗ್ಯಾಸ್’ನ ಐಒಸಿ ಸಂಜೀವ್ ಪ್ರತಿಕ್ರಿಯಿಸಿದರು. `ಸಿ-25 ಎಂದು ಬರೆದಿರುವ ಗ್ಯಾಸ್ ಸಿಲೆಂಡರ್’ಗೆ ಸೆಪ್ಟೆಂಬರ್ ಮುಗಿಯುವವರೆಗೂ ಬಳಕೆಗೆ ಅವಕಾಶವಿದೆ. ಅಷ್ಟರೊಳಗೆ ಅದನ್ನು ಬಳಸಬೇಕು’ ಎಂದವರು ಮಾಹಿತಿ ನೀಡಿದರು.
`ಗ್ಯಾಸ್ ಸಿಲೆಂಡರಿನ ತೂಕದಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ದೂರು ಬಂದಿದೆ. ತೂಕ ಮತ್ತು ಅಳತೆ ಇಲಾಖೆಯ ವ್ಯಾಪ್ತಿಗೆ ಈ ದೂರು ಬರಲಿದ್ದು, ಪರಿಶೀಲನೆಗೆ ಸೂಚಿಸಲಾಗಿದೆ’ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ಅವರು ಮಾಹಿತಿ ನೀಡಿದರು. ಗ್ಯಾಸ್ ಸಿಲೆಂಡರಿನ ತೂಕದಲ್ಲಿನ ವ್ಯತ್ಯಾಸ ಇದೇ ಮೊದಲಲ್ಲ. ಅವಧಿ ಮೀರಿರುವ ಹಾಗೂ ಅವಧಿ ಮೀರಲು ಕೆಲವೇ ದಿನ ಬಾಕಿಯಿರುವ ಗ್ಯಾಸ್ ಸಿಲೆಂಡರ್ ಬಗ್ಗೆ ತಿಳಿಸಿದರೂ ಎಜನ್ಸಿಯವರು ಗಂಭೀರವಾಗಿ ಪರಿಗಣಿಸಿಲ್ಲ. ಸಿಲೆಂಡರ್ ಡ್ಯಾಮೇಜ್ ಸ್ಥಿತಿಯಲ್ಲಿದ್ದರೂ ಕೇಳುವವರಿಲ್ಲ’ ಎಂದು ಅನೇಕರು ಅಳಲು ತೋಡಿಕೊಂಡರು.

ತೂಕ, ಅಳತೆ ಹಾಗೂ ವಾಯಿದೆ ಬಗ್ಗೆ ಗ್ರಾಮೀಣ ಭಾಗದ ಜನ ಹೆಚ್ಚಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ವ್ಯಾಪಾರಿಗಳು ಗ್ರಾಹಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಜನ ಧೈರ್ಯವಾಗಿ ದೂರು ಕೊಡಬೇಕು,ಅಡುಗೆ ಅನಿಲ ವಿತರಣೆಯಲ್ಲಿನ ಲೋಪದ ಬಗ್ಗೆ ಗ್ಯಾಸ್ ಎಜನ್ಸಿಗೆ ಫೋನ್ ಮಾಡಿ, ಅನ್ಯಾಯಕ್ಕೆ ಒಳಗಾದ ಗ್ರಾಹಕರ ಫೋನ್ ಸಂಖ್ಯೆ ನೀಡಲಾಗಿದೆ. `ಈ ಬಗ್ಗೆ ವಿಚಾರಿಸಿ ಪ್ರತಿಕ್ರಿಯಿಸುವೆ’ ಎಂದ ಎಜನ್ಸಿಯವರು ನಂತರ ಪ್ರತಿಕ್ರಿಯೆ ನೀಡಲಿಲ್ಲ. ಸದ್ಯ ದೂರುದಾರರು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸಹ ತಮಗಾದ ಅನ್ಯಾಯದ ಬಗ್ಗೆ ದೂರು ನೀಡಿದ್ದಾರೆ.


Leave a Reply