ಅಂಕೋಲಾ:ಹೊಸದೇವತಾ ಜಲಪಾತ (hosadevata Falls)ದಲ್ಲಿ ಪ್ರವಾಸಿಗರ ಹುಚ್ಚಾಟ ಮೀತಿಮೀರಿದ್ದು, 25 ರಿಂದ 30 ಅಡಿಯಿಂದ ನೀರು ದುಮ್ಮಿಕ್ಕುವ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಹುಚ್ಚಾಟ ಮೆರೆಯುತ್ತಿದ್ದು ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಹೌದು… ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಾಸರಕುದ್ರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನಗುಳಿಯ ನಿಸರ್ಗದ ಮಡಿಲಿನಲ್ಲಿ ಕಲ್ಲಿನ ಮೇಲೆ ದುಮ್ಮಿಕ್ಕುತ್ತ ನೀರಿನ ತೊರೆಯೊಂದು ಹರಿಯುತ್ತಿದ್ದು ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದೆ,ಜಲಪಾತದ ವೈಭವವೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ರಾಜ್ಯಾದ್ಯಂತ ಪ್ರವಾಸಿಗರ ದಂಡೇ ಹರಿದುಬರುತ್ತಿದೆ, ಪ್ರಾಕೃತಿಕ ಸೊಭಗಿನಿಂದ ಕೂಡಿದ್ದ ಜಲಪಾತ ಪ್ರವಾಸಿಗರ ದಟ್ಟಣೆಯಿಂದ ಅನೈರ್ಮಲ್ಯದ ವಾತಾವರಣಕ್ಕೆ ಎಡೆಮಾಡಿಕೊಟ್ಟಿದೆ.

ಪ್ರವಾಸಿಗರ ಹುಚ್ಚಾಟ!
ಜಲಪಾತ ವೀಕ್ಷಣೆಗೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಅಗಮಿಸುತ್ತಿದ್ದು, ಪರಿಸರ ಪ್ರೇಮಿಗಳು ಯಾವುದೇ ಅಡ್ಡಪರಿಣಾಮ ಬೀರದೆ ಕೇವಲ ಪ್ರಾಕೃತಿಕ ಸೌಂದರ್ಯವನ್ನಷ್ಟೇ ಅನುಭವಿಸಿ ತೆರಳಿದರೆ,ಇನ್ನು ಕೆಲವರು ಜಲಪಾತದ ತುತ್ತ ತುದಿಯಲ್ಲಿ ನಿಂತು ಹುಂಬತನ ಪ್ರದರ್ಶಿಸುತ್ತಿದ್ದಾರೆ, ಹಾಗೆಯೇ ಸೆಲ್ಫಿ ಕ್ರೇಜ್ ಗೆ ಅಪಾಯಕಾರಿ ಸ್ಥಳಗಳಾದ ಕಲ್ಲಿನ ಬಂಡೆಯ ತುದಿ, ರಭಸದಿಂದ ಹರಿಯುವ ನೀರಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವುದು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಜಲಪಾತದ ತುತ್ತತುದಿಯಲ್ಲಿ ನಿಂತು ಫೋಟೋಗೆ ಪೋಸ್ ನೀಡುವ ಭರದಲ್ಲಿ ಚೂರು ಆಯ ತಪ್ಪಿದರೂ ಸಹ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇನ್ನು ಯುವಕರ, ಮಹಿಳೆಯರು ಮಕ್ಕಳು ಸೇರಿದಂತೆ ಜಲಪಾತದ ತುದಿಯಲ್ಲಿ ಹುಚ್ಚಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.

ದೇವಸ್ಥಾನದ ಪಾವಿತ್ರ್ಯತೆಗೆ ದಕ್ಕೆ!
ಹೊಸದೇವತಾ ಜಲಪಾತದಲ್ಲಿ ಎರಡು ದೇಗುಲಗಳಿದ್ದು, ಸ್ಥಳೀಯರ ಗ್ರಾಮದೇವಿಯಾಗಿ ಸಲಹುವ ಹೊಸದೇವತೆಯಿಂದಲೇ ಈ ಜಲಪಾತಕ್ಕೆ ಹೊಸದೇವತಾ ಪಾಲ್ಸ್ ಎಂದು ನಾಮಕರಣವಾಗಿದೆ. ಸ್ಥಳೀಯರು ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ನೆರವೇತಿಸುತ್ತಾ ಆರಾಧಿಸುತ್ತಿದ್ದು, ಅಲ್ಲಿಯೇ ಬಿಡಿಬಿಟ್ಟು ಪ್ರವಾಸಿಗರಿಂದ ಯಾವುದೇ ನೈರ್ಮಲ್ಯವಾಗದಂತೆ ಎಚ್ಚರಿಕೆವಹಿಸುತ್ತಿದ್ದಾರೆ. ಮಳೆ ಬರುತ್ತಿದ್ದಂತೆಯೇ ತಂಗುದಾಣವಾಗಿ ಮಾರ್ಪಡುವ ದೇಗುಲಗಳ ಬಳಿ ಪ್ರವಾಸಿಗರು ಮದ್ಯದ ಅಮಲಿನಲ್ಲಿ ತೆರಳುತ್ತಿದ್ದು ದೇವಸ್ಥಾನದ ಪಾವಿತ್ರ್ಯತೆಗೆ ದಕ್ಕೆಯಾಗದಿರಲಿ ಎನ್ನುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಹೇಳೋರಿಲ್ಲ…ಕೇಳೋರಿಲ್ಲ…ಪೊಲೀಸರಂತೂ ಮೊದಲೇ ಇಲ್ಲ!
ಬೋರ್ಗರೆವ ಜಲಪಾತವನ್ನು ನೋಡಲು ಪ್ರವಾಸಿಗರ ದಂಡೇ ಅಗಮಿಸುತ್ತಿದ್ದು, ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಯಾವೊಬ್ಬ ಅಧಿಕಾರಿಯೂ ಇಲ್ಲಿಲ್ಲ,ಬದಲಾಗಿ ಚಿಕ್ಕ ಮಕ್ಕಳಿಂದ ಹಿಡಿದು ಹೆಣ್ಣು ಮಕ್ಕಳು ರಾಶಿ ರಾಶಿ ಸಂಖ್ಯೆಯಲ್ಲಿ ಜಲಪಾತ ವೀಕ್ಷಣೆಗೆ ಬರುತ್ತಾರೆ,ಅವರಿಗೆ ಭದ್ರತೆಯ ದೃಷ್ಟಿಯಿಂದ ಯಾರೊಬ್ಬ ಗೃಹರಕ್ಷಕ ದಳ ಅಥವಾ ಪೊಲೀಸರು ಇಲ್ಲಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ.ಈ ಕುರಿತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ಕುಡುಕರ ಹಾಟ್ಸ್ಪಾಟ್!
ನಿಸರ್ಗದ ಮಡಿಲಿನಲ್ಲಿರುವ ಜಲಪಾತದ ವೀಕ್ಷಣೆಗೆ ಸಹಸ್ರಸಂಖ್ಯೆಯಲ್ಲಿ ಪ್ರವಾಸಿಗರು ಅಗಮಿಸುತ್ತಿದ್ದು,ಕುಡುಕರ ಹಾವಳಿ ಹೆಚ್ಚಿದೆ ಎನ್ನಲಾಗಿದೆ,ರಜಾ ದಿನಗಳಲ್ಲಿ ಮೋಜುಮಾಡಲು ಇಲ್ಲಿಗೆ ಬರುತ್ತಿದ್ದು, ಜಲಪಾತದ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡುತ್ತಾರೆ ಎನ್ನಲಾಗಿದೆ. ಏರು ದ್ವನಿಯಲ್ಲಿ ಹಾಡುತ್ತಾ,ಕುಣಿಯುತ್ತಾ,ಕಿಚಾಯಿಸುತ್ತಾ ಇರುವುದು ಕೆಲ ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಅದಲ್ಲದೆ ಕಿರಿದಾದ ರಸ್ತೆಯಲ್ಲಿ ಅಲ್ಲಾಡುತ್ತಾ ತೆರಳುವ ಕುಡುಕರಿಂದ ರಸ್ತೆಹೋಕರಿಗೂ ಅಡಚಣೆ ಉಂಟಾಗುತ್ತಿದೆ.


Leave a Reply