ಕೇಣಿ ಗ್ರೀನ್ ಫೀಲ್ಡ್ ಬಂದರಿನ ಕುರಿತು ಇಲಾಖೆಯೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಜೆ ಎಸ್ ಡಬ್ಲ್ಯೂ ಕಂಪನಿ.

Spread the love

ಅಂಕೋಲಾ: ಕೇಣಿಯ ಸಮುದ್ರ ತೀರದಲ್ಲಿ ನಿರ್ಮಾಣವಾಗಲಿರುವ ಉದ್ದೇಶಿತ ಆಳಸಮುದ್ರ ಗ್ರೀನ್ ಫೀಲ್ಡ್ ಬಂದರಿನಿಂದ ಅಂಕೋಲಾ ತಾಲೂಕಿನ ಹಾಗೂ ಜಿಲ್ಲೆಯ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದ್ದು, ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆಯಾಗದಂತೆ‌ ಬಂದರು ನಿರ್ಮಾಣ ಮಾಡಲಾಗುವದು ಎಂದು ಜೆ ಎಸ್ ಡಬ್ಲ್ಯೂ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರೇಶ್ಮಾ ಉಲ್ಲಾಳ ಹೇಳಿದರು.

ಅವರು ಬಂದರು ಮತ್ತು‌ ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಗುತ್ತಿಗೆ ಪಡೆದ ಜೆ ಎಸ್ ಡಬ್ಲ್ಯೂಕಂಪನಿಯವತಿಯಿಂದ ತಾಲ್ಲೂಕಿನ ಪತ್ರಕರ್ತರಿಗೆ ಪಿ ಪಿ ಟಿ ಮೂಲಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಇದೊಂದು ರಾಜ್ಯ ಸರಕಾರದ ಯೋಜನೆಯಾಗಿದ್ದು 2022-23 ನೇ ಆರ್ಥಿಕ ವರ್ಷದ ಬಜೆಟಿನಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿಯ ಮೂಲಕ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ಗ್ರೀನ್ ಫೀಲ್ಡ್ ಬಂದರನ್ನು ಅಭಿವೃದ್ಧಿಪಡಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ 29 ನವೆಂಬರ 2023 ರಲ್ಲಿ ಜೆ ಎಸ್ ಡಬ್ಲ್ಯೂ ಕೇಣಿ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಬಂದರು ಮೊದಲ ಹಂತದಲ್ಲಿ ವಾರ್ಷಿಕ 30 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಲಿದ್ದು ನಂತರದಲ್ಲಿ 92 ಮೆಟ್ರಿಕ್ ಟನ್ ರಫ್ತು ಸಾಮರ್ಥ್ಯ ಹೊಂದಲಿದ್ದು, ರಾಜ್ಯ ಸರಕಾರದ ಬೊಕ್ಕಸಕ್ಕೆ ಗಣನೀಯ ಆದಾಯ ಹೆಚ್ಚಲಿದೆ. ಅಲ್ಲದೆ ಬಂದರು ಸುತ್ತಮುತ್ತ ಪ್ರದೇಶದಲ್ಲಿ ಬಂದರು ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ದೊರೆಯಲಿದ್ದು, ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವೆ ಸರಕು ಸಾಗಾಣಿಕೆಯ ಪ್ರಮುಖ ಕೇಂದ್ರವಾಗಲಿದೆ.

ಭೂಸ್ವಾಧೀನಕ್ಕೆ ಉತ್ತಮ ಪರಿಹಾರ!

ಗ್ರೀನ್ ಫೀಲ್ಡ್ ಬಂದರು ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಒಳಗಾಗುವ ಜಮೀನು, ಕಟ್ಟಡಗಳಿಗೆ ಸರಕಾರದ‌ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸುವದಲ್ಲದೆ ಮೀನುಗಾರರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವದು.ಬಂದರು ಯೋಜನೆಯಿಂದ ರಾಷ್ಟ್ರೀಯ ಹೆದ್ದಾರಿ 66 ವರೆಗೆ 4.5 ಕಿ.ಮೀ ಉದ್ದ ರಸ್ತೆ ಮತ್ತು 6.5 ಕಿ.ಮೀ ರೈಲ್ವೆ ಸಂಪರ್ಕ ಹೊಂದಲಿದೆ.
ರಸ್ತೆ ಸಂಪರ್ಕಕ್ಕಾಗಿ ಭಾವಿಕೇರಿ ಗ್ರಾಮದಲ್ಲಿ 25 ಮನೆ ಸಹಿತ 59 ಎಕರೆ, ಅಂಕೋಲಾ ಗ್ರಾಮದ 25 ಮನೆಗಳ ಸಹಿತ 25 ಎಕರೆ, ಶಿರಕುಳಿ ಗ್ರಾಮದ 18 ಮನೆ ಸಹಿತ 43 ಎಕರೆ, ಅಲಗೇರಿ ಗ್ರಾಮದ 7 ಮನೆ ಸಹಿತ 11 ಎಕರೆ ಒಟ್ಟೂ ಅಂದಾಜು 240 ಎಕರೆ ಜಮೀನು ಭೂಸ್ವಾಧಿಗೊಳ್ಳಲಿದೆ. ಇದಲ್ಲದೆ ಸರಕು ಸಂಗ್ರಹಣೆಗಾಗಿ ಶಿರಕುಳಿಯಲ್ಲಿ 157 ಎಕರೆ, ಅಲಗೇರಿಯಲ್ಲಿ 10 ಎಕರೆ, ಬೊಗ್ರಿಬೈಲನಲ್ಲಿ 134 ಎಕರೆ, ಬಾಳೆಗುಳಿಯಲ್ಲಿ 24 ಎಕರೆ ಹೀಗೆ ಒಟ್ಟೂ 324 ಎಕರೆ ಜಮೀನನ್ನು ಗುರುತಿಸಲಾಗಿದೆ.ಒಟ್ಟಾರೆಯಾಗಿ ಕೇಣಿ ಬಂದರು ನಿರ್ಮಾಣದಿಂದ ಅಂಕೋಲಾ ತಾಲೂಕಿನ ಹಾಗೂ ಜಿಲ್ಲೆಯ ಅಭಿವೃದ್ಧಿಯ ಚಿತ್ರಣವೇ ಬದಲಾಗಲಿದೆ ಎಂದರು. ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆಯಾಗದಂತೆ‌ ಬಂದರು ನಿರ್ಮಾಣ ಮಾಡಲಾಗುವದು ಎಂದು ಜೆ ಎಸ್ ಡಬ್ಲ್ಯೂ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರೇಶ್ಮಾ ಉಲ್ಲಾಳ ಹೇಳಿದರು.

ಗ್ರೀನ್ ಫೀಲ್ಡ್ ಬಂದರಿನಿಂದ ಉದ್ಯೋಗ ಸೃಷ್ಟಿ!

ಕೇಣಿಯಲ್ಲಿ ವಾಣಿಜ್ಯ ಬಂದರು ಕಾಮಗಾರಿ ಪ್ರಾರಂಭವಾಗುತ್ತಲೇ ಅರ್ಹ ಸ್ಥಳೀಯರಿಗೆ ಉದ್ಯೋಗದ ಸಿಗಲಿದೆ. ಐಟಿಐ, ಡಿಪ್ಲೋಮಾ ಇನ್ನಿತರ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಸರಕು ನಿರ್ವಹಣೆ, ಆಪರೇಟರ್, ಡಾಕಿಂಗ್, ತಾಂತ್ರಿಕ ಸಿಬ್ಬಂದಿ, ಚಾಲಕರು, ಸ್ವಚ್ಛತೆ, ಭದ್ರತೆ ಮುಂತಾದ ಪ್ರತ್ಯಕ್ಷ ಪರೋಕ್ಷ‌ ಉದ್ಯೋಗಾವಕಾಶಗಳ ಜೊತೆಗೆ ಬೇಕರಿ, ಹೋಟೆಲ್, ನೀರು, ಹಾಲು, ತರಕಾರಿ, ಇಂಧನ ಮಾಂಸ ಪೂರೈಕೆ ಮುಂತಾದ ಉದ್ಯಮಗಳಿಗೆ ಅವಕಾಶ ಸಿಗಲಿದೆ. ಶಾಲೆಗಳು, ಆಸ್ಪತ್ರೆಗಳು, ಕ್ಲಿನಿಕ್, ಬಾಡಿಗೆ ವಸತಿ ಗೃಹ, ಕಿರಾಣಿ ಅಂಗಡಿ ಮುಂತಾದ ಸೇವೆಗಳಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಯೋಜನಾ ಮುಖ್ಯಸ್ಥ ಭರಮಪ್ಪ ಕುಂಟಿಗೇರಿ ತಿಳಿಸಿದರು.

ಈ ಸಂದರ್ಭದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿ ಬಸಪ್ಪ ನಾಯರ, ಜೆ ಎಸ್ ಡಬ್ಲ್ಯೂ ಕಂಪನಿಯ ಆಡಳಿತಾಧಿಕಾರಿ ಸರ್ವೇಶ ನಾಯಕ ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *