ಅಂಕೋಲಾ:ಕೆ ಎಸ್ ಆರ್ ಟಿ ಸಿ ಲೋಕಲ್ ಬಸ್ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇರ್ವರು ಸಾವನ್ನಪ್ಪಿದ ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಅಡ್ಲೂರಿನ ತರಂಗ ಹೋಟೆಲ್ ಬಳಿ ನಡೆದಿದೆ.

ಹೌದು… ಮಕ್ಕಿಗದ್ದೆಯಿಂದ ಪ್ರಯಾಣಿಕರನ್ನು ಹೊತ್ತು ಅಂಕೋಲಾ ಕಡೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಓವರ್ ಟೇಕ್ ಮಾಡುವ ಭರದಲ್ಲಿ ಕಾರವಾರದಿಂದ ಹುಬ್ಬಳ್ಳಿ ಕಡೆ ಚಲಿಸುತ್ತಿದ್ದ ಸೌರವ್ ಲಾಜಿಸ್ಟಿಕ್ ಕಂಪನಿಗೆ ಸೇರಿದ ಖಾಲಿ ಟ್ಯಾಂಕರ್ ಡಿಕ್ಕಿಯಾಗಿದ್ದು,ಬಸ್ ರಸ್ತೆಯಲ್ಲಿ ಪಲ್ಟಿಯಾಗಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಚಾಲಕ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದ ಶರಣಪ್ಪ ಸಂಗಪ್ಪ ಕೋಳೂರು(30) ಹಾಗೂ ಬಸ್ಸಿನಲ್ಲಿದ್ದ ಅಂಕೋಲಾ ತಾಲೂಕಿನ ಕೇಣಿ ಮೂಲದ ಪ್ರಯಾಣಿಕ ಬಾಸ್ಕರ್ ಪಾಂಡುರಂಗ ಗಾಂವ್ಕರ್ (56) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಬಸ್ಸಿನ ಚಾಲಕ ಕಮಲಾಕರ್ ನಾಯ್ಕ ಎಡಗಾಲಿಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಅಂಕೋಲಾ ಪಿಎಸೈ ಸುನಿಲ್ ಹುಳ್ಳೊಳ್ಳಿ ಆಗಮಿಸಿ ರಕ್ಷಣಕಾರ್ಯಕ್ಕೆ ಮುಂದಾಗಿದ್ದು, ಸ್ಥಳೀಯರು ಸಹಕರಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


