ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗುಡಿಗಾರಗಲ್ಲಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕಿನಿಂದ ಇಬ್ಬರು ಕಳ್ಳರು ಪೆಟ್ರೋಲ್ ಕದಿಯಲು ಯತ್ನಿಸಿದ್ದು, ಈ ಕೃತ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,ಈ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ಗುಡಿಗಾರಗಲ್ಲಿಯ ನಿವಾಸಿ ಚಂದ್ರಕಾಂತ ನಾಯ್ಕ ಎನ್ನುವವರಿಗೆ ಸೇರಿದ ಬೈಕಿನಲ್ಲಿ ಪೆಟ್ರೋಲ್ ಈ ಕಳ್ಳತನ ನಡೆದಿದೆ ಎನ್ನಲಾಗಿದೆ.ಇಬ್ಬರು ಅಪರಿಚಿತ ಕಳ್ಳರು ಬಾನುವಾರ ಸಂಜೆ ಸುಮಾರು 7.30 ರ ಸುಮಾರಿಗೆ ಬಂದು, ಕೃಷ್ಣ ನಾಯ್ಕ ಅವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ನಿಂದ ಪೆಟ್ರೋಲ್ ಅನ್ನು ಹೀರಿಕೊಳ್ಳುವ ಮೂಲಕ ಕದಿಯಲು ಪ್ರಯತ್ನಿಸಿದ್ದು,ಕಳ್ಳತನದ ಸಂಪೂರ್ಣ ದೃಶ್ಯ ಬೈಕ್ ಮಾಲಕರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳತನದ ಬಗ್ಗೆ ಅರಿತ ಬೈಕ್ ಮಾಲೀಕ ಚಂದ್ರಕಾಂತ ನಾಯ್ಕ ಅವರು ತಕ್ಷಣ ಅಂಕೋಲಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಳ್ಳತನದ ದೃಶ್ಯಾವಳಿಗಳನ್ನು ಸಹ ನೀಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಅಂಕೋಲಾ ಸಿಪಿಐ ಚಂದ್ರಶೇಖರ್ ಮಠಪತಿ ಕಳ್ಳರನ್ನು ಪತ್ತೆ ಹಚ್ಚಲು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ಸಾರ್ವಜನಿಕರು ತಮ್ಮ ವಾಹನಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.


