ಅಂಕೋಲಾ:ವಿಧಾತ್ರಿ ಅಕಾಡೆಮಿ ಮಂಗಳೂರು ಸಂಸ್ಥೆಯಿಂದ ಡಿಸೆಂಬರ್ 14 ರಂದು ಸಂಜೆ 4 ಗಂಟೆಗೆ ಅಂಕೋಲೆಯ ಐತಿಹಾಸಿಕ,ಪ್ರಾಕೃತಿಕ, ಭೌಗೋಳಿಕ ವಿಶೇಷತೆ ಹೊಂದಿರುವ ವಿಡಿಯೋ ಅನಾವರಣ, ಅಂಕೋಲೆಯ ಅಂತರ್ಯದ ಅನಾವರಣ ‘ಅರಳು’ ಕಾರ್ಯಕ್ರಮ ಮತ್ತು ಖ್ಯಾತ ವಾಗ್ಮಿಗಳ ಮಥನ ಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ವಿಧಾತ್ರಿ ಅಕಾಡೆಮಿಯ ಸಂಸ್ಥಾಪಕ ಗುರುರಾಜ ಶೆಟ್ಟಿ ಹೇಳಿದರು.

ಅವರು ಪಟ್ಟಣದ ಖಾಸಗಿ ಹೋಟೆಲ್ ಒಂದರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಮ್ಮ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೇವೆ ಆರಂಭಿಸಿ ಯಶಸ್ವಿ ಐದು ವರ್ಷಗಳು ಪೂರೈಸಿದ್ದು ಜಿಲ್ಲೆಯ ಜನರ ಸಹಕಾರಕ್ಕೆ ಋಣಿಯಾಗಿ ಜಿಲ್ಲೆಗಾಗಿ ಏನಾದರೂ ಮಾಡಬೇಕು ಎಂಬ ಆಕಾಂಕ್ಷೆಯಿಂದ ಜನರು ಉತ್ತರ ಕನ್ನಡ ಜಿಲ್ಲೆಯತ್ತ ತಿರುಗಿ ನೋಡುವಂತಾಗಬೇಕು ಎಂದು ಜಿಲ್ಲೆಯ ವಿಶೇಷತೆಯನ್ನು ಪರಿಚಯಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಕಳೆದ ವರ್ಷ ಕುಮಟಾ, ಹೊನ್ನಾವರ ತಾಲೂಕುಗಳ ಮೇಲೆ ಬೆಳಕು ಚೆಲ್ಲಿರುವ ಸಂಸ್ಥೆ ಈ ವರ್ಷ ಅಂಕೋಲೆಯನ್ನು ಪರಿಚಯಿಸುವ ದಿಶೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಉತ್ತರ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ ಸಾಧನೆ ಮಾಡಿದರೂ ಜಿಲ್ಲೆಯ ವಿಶೇಷತೆಗಳ ಕುರಿತು ಜಿಲ್ಲೆಯ ಹೊರಗಿನ ಜನರಿಗೆ ಹೆಚ್ಚಿನ ಮಾಹಿತಿ
ಇಲ್ಲದಂತಾಗಿದೆ ಅರಳು ಕಾರ್ಯಕ್ರಮದ ಮೂಲಕ ಅಂಕೋಲೆಯ ವಿಶೇಷತೆ ಕುರಿತು ತಯಾರಿಸಿರುವ ವಿಡಿಯೋ ಅನಾವರಣ ನಡೆಯಲಿದೆ ಎಂದರು.

ತಹಸೀಲ್ದಾರ ಡಾ.ಚಿಕ್ಕಪ್ನ ನಾಯಕ ಕಾರ್ಯಕ್ರಮ ಉದ್ಘಾಟಿಸಲಿದ್ದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳಗೌರಿ ಭಟ್ಟ ವೀಡಿಯೊ ಅನಾವರಣ ಮಾಡಲಿದ್ದಾರೆ, ಕೊಂಕಣ ಎಜ್ಯಕೇಶನ್ ಟ್ರಸ್ಟಿನ ಕಾರ್ಯದರ್ಶಿ ಮುರಳೀಧರ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ವಿಡಿಯೋ ಅನಾವರಣದ ನಂತರ
ಬಾಂಧವ್ಯದ ಬಂಧ ಕಳಚಲು ಕಾರಣರು ಯಾರು ಕಿರಿಯರೋ? ಹಿರಿಯರೋ? ಎನ್ನುವ ಕುರಿತಂತೆ ಜಿಲ್ಲೆಯ ವಾಗ್ಮಿಗಳಿಂದ ಚರ್ಚೆ ನಡೆಯಲಿದ್ದು ಮಥನ ಮಂಜರಿಯಲ್ಲಿ ರವೀಂದ್ರ ಭಟ್ಟ ಸೂರಿ, ವಕೀಲ ನಾಗರಾಜ ನಾಯಕ, ಶಿಕ್ಷಕ ಮಂಜುನಾಥ ಬರ್ಗಿ, ರಾಜೇಶ ನಾಯಕ ಸೂರ್ವೆ,ಕುಂದಾಪುರ ಕನ್ನಡದ ರಾಯಭಾರಿ ಮನು ಹಂದಾಡಿ,ಉಪನ್ಯಾಸಕ ಪ್ರಶಾಂತ ಹೆಗಡೆ, ಸಾಹಿತಿ ತಿಗಣೇಶ ಮೊದಲಾದವರು ಚರ್ಚೆ ನಡೆಸಲಿದ್ದಾರೆ ಎಂದರು.

ಸತ್ವಾಧಾರ ಫೌಂಡೇಶನ್ ಸಂಸ್ಥಾಪಕ ಗಣೇಶ ಜೋಶಿ ಮಾತನಾಡಿ ಸಮಾಜದಲ್ಲಿ ಭಾಂದವ್ಯದ ಬಂಧ ಕಳಚಿ ಪ್ರಕ್ಷ್ಯುಬ್ಧ ವಾತಾವರಣ ನಿರ್ಮಾಣಕ್ಕೆ ಕಾರಣ ಏನು ಎನ್ನುವ ಕುರಿತು ವಿಶೇಷ ಚರ್ಚೆ ನಡೆಯಲಿದ್ದು ಇದು ಇಂದಿನ ಕಾಲಮಾನಕ್ಕೆ ಅತ್ಯಂತ ಅಗತ್ಯವಾದುದು ವಿಧಾತ್ರಿ ಅಕಾಡೆಮಿಯ ನಡೆಸುತ್ತಿರುವ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.ರಂಗ ಸಾರಸ್ವತ ಸಂಸ್ಥೆಯ ಸಂಸ್ಥಾಪಕ ಚಿದಾನಂದ ಭಂಡಾರಿ ಮಾತನಾಡಿದರು.


