ಅಂಕೋಲಾ: ಅಂಕೋಲಾ ಕಾರವಾರ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಕಾರ್ಪೊರೇಶನ್ ಅಧ್ಯಕ್ಷರಾದ ಸತೀಶ ಸೈಲ್ ಅವರ 58 ನೇ ಹುಟ್ಟುಹಬ್ಬವನ್ನು ತಾಲೂಕಿನ ದೊಡ್ಡ ದೇವರಾದ ವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,ವೃದ್ದಾಶ್ರಮದಲ್ಲಿ ಕೇಕ್ ಕತ್ತರಿಸಿ,ಅಲ್ಲಿಯವರಿಗೆ ಊಟ ನೀಡಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹೌದು… ಶಾಸಕ ಸತೀಶ್ ಸೈಲ್ ಅವರ 58 ನೇ ಹುಟ್ಟುಹಬ್ಬವನ್ನು ಅಂಕೋಲಾ ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ದೊಡ್ಡ ದೇವರಾದ ವೆಂಕಟರಮಣ ಸೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು.ಹಾಗೂ ಶ್ರೀ ಗಜಾನನ ಭಜನಾ ಮಂಡಳಿ ಅಲಗೇರಿಯವತಿಯಿಂದ ದೇಗುಲದಲ್ಲಿ ಬೆಳಿಗ್ಗೆಯಿಂದಲೇ ಭಜನಾಮೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ನಂತರ ತಾಲೂಕಿನ ಕಾರವಾರ ರಸ್ತೆಯಲ್ಲಿರುವ ವೃದ್ದಾಶ್ರಮಕ್ಕೆ ತೆರಳಿ ಅಲ್ಲಿಯ ಹಿರಿಯರ ಕೈಯ್ಯಿಂದ ಕೇಕ್ ಕತ್ತರಿಸುವ ಮೂಲಕ ಶಾಸಕ ಸತೀಶ್ ಸೈಲ್ ಅವರ ಜನ್ಮದಿನವನ್ನು ಅದ್ದೂರಿಯಿಂದ ಆಚರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ ಮಾತನಾಡಿ ಸದಾ ಜನಪರ ಕಾಳಜಿಯುಳ್ಳ ಶಾಸಕ ಸತೀಶ್ ಸೈಲ್ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ, 58 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ನಮ್ಮ ನಾಯಕ ಸತೀಶ್ ಸೈಲ್ ರವರ ಮುಂದಿನ ಜೀವನ ಹಾಗೂ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ,ದೇವರು ಅವರಿಗೆ ಆರೋಗ್ಯ ಆಯಸ್ಸನ್ನು ನೀಡಿ ಮತ್ತಷ್ಟು ಜನಸೇವೆ ಮಾಡುವ ಅವಕಾಶ ನೀಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಜಾತಾ ಗಾಂವ್ಕರ್ ಮಾತನಾಡಿ ಬಡಬಗ್ಗರ ಸೇವೆಯಲ್ಲಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ನಿರಂತರ ಸೇವೆಗೈಯ್ಯುತ್ತಿರುವ ಶಾಸಕ ಸತೀಶ್ ಸೈಲ್ ಅವರ 58 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕ್ಷೇತದಲ್ಲಿ ಅಭಿವೃದ್ಧಿಯ ಹರಿಕಾರರೆಂದೇ ಗುರುತಿಸಿಕೊಂಡಿರುವ ನಮ್ಮ ಹೆಮ್ಮೆಯ ಶಾಸಕ ಸರಳ ಸಜ್ಜನಿಕೆಯರೆನ್ನುವುದು ನಮಗೆ ಹೆಮ್ಮೆಯಾಗಿದೆ ಎಂದರು.

ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಪಾಂಡುರಂಗ ಗೌಡ ಮಾತನಾಡಿ ಸತೀಶ ಸೈಲ್ ಎಲ್ಲರೊಂದಿಗೆ ಬೆರೆಯುವ ಸ್ನೇಹಜೀವಿ, ಅಂಕೋಲಾ ತಾಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಅಭಿವೃದ್ಧಿಯ ಹರಿಕಾರರಾಗಿ ಗುರುತಿಸಿ ಕೊಂಡಿರುವ ನಮ್ಮೆಲ್ಲರ ಪ್ರೀತಿಯ ಶಾಸಕರು ಶಿರೂರು ಗುಡ್ಡಕುಸಿತ ಸಂದರ್ಭದಲ್ಲಿ ತಮ್ಮ ಕಾರ್ಯಕ್ಷಮತೆಯಿಂದ ಜನಸಾಮಾನ್ಯರ ಶಾಸಕ ಎಂದು ಗುರುತಿಸಿಕೊಂಡಿದ್ದಾರೆ.

ಜಿಪಂ ಮಾಜಿ ಸದಸ್ಯ ವಿನೋದ ನಾಯಕ ಮಾತಾನಾಡಿ ಸಾರ್ವಜನಿಕ ಜೀವನಕ್ಕೆ ತಮ್ಮ ಜೀವನವನ್ನೇ ಮೂಡುಪಾಗಿರಿಸಿ ಎರಡನೇ ಬಾರಿ ಶಾಸಕರಾಗಿ ಮತ್ತೊಮ್ಮೆ ಆಯ್ಕೆಯಾಗಿ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಎಚ್ ಗೌಡ,ಜಿಪಂ ಮಾಜಿ ಸದಸ್ಯ ವಿನೋದ ಬಾಸ್ಕೊಡ್,ತಾಪಂ ಮಾಜಿ ಸದಸ್ಯರಾದ ಶಾಂತಿ ಆಗೇರ,ಮಂಜುಳಾ ವೆರ್ಣೇಕರ್, ಮಂಜುನಾಥ್ ನಾಯ್ಕ,ಬಾವಿಕೇರಿ ಗ್ರಾಪಂ ಅಧ್ಯಕ್ಷೆ ಸವಿತಾ,ವಾಸರಕುದ್ರಿಗೆ ಗ್ರಾಪಂ ಅಧ್ಯಕ್ಷ ಪ್ರದೀಪ ನಾಯಕ,ಅಲಗೇರಿ ಗ್ರಾಪಂ ಅಧ್ಯಕ್ಷ ಸಂತೋಷ ನಾಯ್ಕ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಬಿ ಡಿ ನಾಯ್ಕ,ವಿನೋದ ಗಾಂವ್ಕರ್,ರಾಮಚಂದ್ರ ನಾಯ್ಕ ಅಗಸೂರು,ಪ್ರಮೋದ ಬಾನಾವಳಿಕರ್,ಶಾಸಕರ ಆಪ್ತ ಕಾರ್ಯದರ್ಶಿ ಜಗದೀಶ್ ಖಾರ್ವಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


