ಅಂಕೋಲಾ: ಇಂದಿನ ಕನ್ನಡ ಶಾಲೆಗಳಿಗೆ ಹಳೆಯ ವಿದ್ಯಾರ್ಥಿಗಳೇ ಆಸ್ತಿಯಾಗಿದ್ದಾರೆ, ಆದ್ದರಿಂದ ಹಳೆಯ ವಿದ್ಯಾರ್ಥಿಗಳ ಸಂಘವಾಗಲಿ, ಆ ಸಂಘದ ವಾರ್ಷಿಕೋತ್ಸವವಾಗಲಿ ಯಾವ ಕಾನ್ವೆಂಟಿನಲ್ಲಿಯೂ ಕಾಣಲು ಸಾಧ್ಯವಿಲ್ಲ,ಅದು ನಮ್ಮ ಕನ್ನಡ ಶಾಲೆಯಲ್ಲಿ ಮಾತ್ರ ನೋಡಲು ಸಾಧ್ಯ,ಅದೇ ನಮ್ಮ ಕನ್ನಡ ಮಾಧ್ಯಮ ಶಾಲೆಗಳ ಶಕ್ತಿ, ಹೀಗಾಗಿ ನಾವೆಲ್ಲರೂ ಸರಕಾರಿ ಕನ್ನಡ ಶಾಲೆಯ ಅಭಿವೃದ್ಧಿಗೆ ಹೆಚ್ಚು ಗಮನ ಕೊಡಬೇಕಾಗಿದೆ ಎಂದು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೇಸ್ ಮುಖಂಡ ಗೋಪಾಲಕೃಷ್ಣ ನಾಯಕ ಹೇಳಿದರು.

ಹಳೆಯ ವಿದ್ಯಾರ್ಥಿಗಳ ಸಂಘ (ರಿ) ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಬೊಬ್ರುವಾಡದ ವತಿಯಿಂದ 8 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಅವರು ಹೆತ್ತಮಕ್ಕಳನ್ನು ದೇಶ ಸೇವೆಗೆ ಕಳುಹಿಸಿ ದೇಶಪ್ರೇಮ ಮೆರೆಯುವ ಪ್ರತಿಯೊಬ್ಬ ಯೋಧರ ತಂದೆ ತಾಯಿಯರು ಸನ್ಮಾನಕ್ಕೆ ಅರ್ಹರು, ಆದ್ದರಿಂದ ಯೋಧರ ಜೊತೆಗೆ ಅವರ ತಂದೆತಾಯಿಯರನ್ನು ಗೌರವಿಸಬೇಕು ಹಾಗೆಯೇ ವಿಶೇಷ ಚೇತನರ ಶಿಕ್ಷಣಕ್ಕಾಗಿ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ಮಹತ್ಕಾರ್ಯಕ್ಕೆ ನಾನು ಧನಸಹಾಯದ ಮೂಲಕ ಚಾಲನೆ ನೀಡುತ್ತೇನೆ ಈ ಕಾರ್ಯ ಇಲ್ಲಿಂದಲೇ ಪ್ರಾರಂಭವಾಗಲಿ ಎಂದರು.

ಈ ಸಂದರ್ಭದಲ್ಲಿ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತ ಶಿಕ್ಷಕರಾದ ಚಂಪಾ ನಾಯ್ಕ,ಬೊಮ್ಮಯ್ಯ ನಾಯ್ಕ, ನಿವೃತ್ತ ಸೈನಿಕ ಗಣೇಶ ನಾಯ್ಕ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಬಾಲಚಂದ್ರ ನಾಯಕ,ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಜ್ಯೋತಿ ನಾಯ್ಕ ವೇದಿಕೆಯಲ್ಲಿದ್ದು ಮಾತನಾಡಿದರು. ನದಿಬಾಗ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನೆರವೇರಿತು. ನಂತರ ಹಳೆ ವಿದ್ಯಾರ್ಥಿಗಳ ಸಂಘದಿಂದ “ಜೀವನ ಚಕ್ರ”ಎನ್ನುವ ನಾಟಕ ಪ್ರದರ್ಶಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಗಂಜೇಂದ್ರ ನಾಯ್ಕ ಸರ್ವರನ್ನು ಸ್ವಾಗತಿಸಿದರು,ಕೃಷ್ಣ ನಾಯ್ಕ ನಿರೂಪಿಸಿದರು, ಪ್ರತಾಪ್ ಎಲ್ ನಾಯ್ಕ ವಂದಿಸಿದರು.


