Ankola|ಶಿರೂರು ಗುಡ್ಡ ಕುಸಿತ ಪ್ರಕರಣ; ‘ಐ ಆರ್ ಬಿ’ ಕಂಪನಿಯ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಕೋರ್ಟ್ ಅದೇಶ

Spread the love

ಅಂಕೋಲಾ: ಶಿರೂರು ಗುಡ್ಡ ಕುಸಿತ (Shirur land sliding case) ಪ್ರಕರಣದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಐ ಆರ್ ಬಿ(IRB) ಕಂಪನಿಯ 8 ಅಧಿಕಾರಿಗಳ ವಿರುದ್ಧ ಎಫ್ ಐ ಆರ್ (FIR) ದಾಖಲಿಸಿ ವಿಚಾರಣೆ ನಡೆಸುವಂತೆ ಅಂಕೋಲಾ ಜೆ ಎಂ ಎಫ್ ಸಿ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

ಹೌದು… ಜಿಲ್ಲೆಗೆ 2024 ಜುಲೈ 16 ಕರಾಳ ಮಂಗಳವಾರವಾಗಿದ್ದು ಜಿಲ್ಲೆ ಕಂಡರಿಯದ ಘನಘೋರ ದುರಂತವೊಂದು ಸಂಭವಿಸಿತ್ತು, ರಾಷ್ಟ್ರೀಯ ಹೆದ್ದಾರಿ 66 ರ ಶಿರೂರು ಬಳಿ ಭೀಕರ ಗುಡ್ಡ ಕುಸಿತ ಸಂಭವಿಸಿ 11 ಮಂದಿ ಪ್ರಾಣಕಳೆದುಕೊಂಡಿದ್ದರು, ಗುಡ್ಡ ಕುಸಿತದಲ್ಲಿ ನಾಪತ್ತೆಯಾದ 11 ಮಂದಿಯ ಪೈಕಿ ಏಳು ಮಂದಿಯ ಮೃತದೇಹಗಳು ಗಂಗಾವಳಿ ನದಿಯ ಸಂಗಮ ಪ್ರದೇಶದಲ್ಲಿ ಪತ್ತೆಯಾಗಿತ್ತು,ಮತ್ತೊರ್ವರ ಶವ ಬೆಳಂಬಾರದ ಕಡಲತೀರದಲ್ಲಿ ಕಂಡುಬಂದಿತ್ತು. ಸ್ಥಳೀಯರಾದ ಜಗನ್ನಾಥ ನಾಯ್ಕ,ಲೋಕೇಶ ನಾಯ್ಕ ಹಾಗೂ ಕೇರಳ ಮೂಲದ ಅರ್ಜುನ್ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿರಂತರ ಕಾರ್ಯಾಚರಣೆಗೆ ಮುಂದಾಗಿತ್ತು, ನೀರಿನ ಹರಿತ ಕಡಿಮೆಯಾದಂತೆ ಸಪ್ಟೆಂಬರ್ 19 ರಂದು ಪುನಃ ಕಾರ್ಯಾಚರಣೆ ಆರಂಭಿಸಿದ ಜಿಲ್ಲಾಡಳಿತ ಬಾರ್ಜ್ ಸಹಿತ ಡ್ರಜ್ಜಿಂಗ್ ಯಂತ್ರಗಳ ಸಹಾಯದಿಂದ ನದಿಯೊಳಗೆ ರಾಶಿ ರಾಶಿಯಾಗಿ ಬಿದ್ದಿರುವ ಮಣ್ಣನ್ನ ತೆರವುಗೊಳಿಸುವ ಕಾರ್ಯಾಚರಣೆಗೆ ಇಳಿದಿತ್ತು.ಕಾರ್ಯಾಚರಣೆ ಪ್ರಾರಂಭದಿಂದಲೂ ಅವಶೇಷಗಳ ರಾಶಿಯೇ ಪತ್ತೆಯಾಗಿತ್ತು, ಗ್ಯಾಸ್ ಟ್ಯಾಂಕರ್ ಬಿಡಿಬಾಗಗಳು ದೊರೆಯುತ್ತಿದ್ದಂತೆ ಕಾರ್ಯಾಚರಣೆ ಮತ್ತಷ್ಟು ತೀವೃ ಸ್ವರೂಪ ಪಡೆಯಿತು ಸತತ ನಾಲ್ಕು ದಿನ ನಡೆದ ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ಕುರುಹುಗಳು ದೊರೆತಿರಲಿಲ್ಲ,ಐದನೇ ದಿನದ ಕಾರ್ಯಾಚರಣೆಯಲ್ಲಿ ಲಾರಿಯ ಬಿಡಿಬಾಗ ದೊರೆತಿದ್ದು,ಅದು ನಮ್ಮ ಲಾರಿಯ ಬಾಗವೇ ಎಂದು ಲಾರಿ ಮಾಲಕ ಮೊಬಿನ್ ದೃಢಪಡಿಸಿದ್ದರು ಆರನೇ ದಿನ ಲಾರಿಯ ಬಿಡಿಬಾಗ ದೊರೆತ ಸ್ಥಳದಲ್ಲಿಯೇ ಶೋಧ ಕಾರ್ಯ ಮುಂದುವರೆಸಿದ್ದರು.

ಮಧ್ಯಾಹ್ನ ಭಾರತ್ ಬೆಂಜ್ ಲಾರಿ  ನದಿಯಾಳದಲ್ಲಿ ಮಣ್ಣಿನಿಂದ ಎರಡು ಮೀಟರ್ ನಷ್ಟು ಹುದುಗಿಕೊಂಡಿರುವ ರೀತಿಯಲ್ಲಿ ಪತ್ತೆಯಾಗಿತ್ತು,ಡ್ರೆಜ್ಜಿಂಗ್ ಮಶಿನ್ ಮಣ್ಣನ್ನು ತೆರವುಗೊಳಿಸಿ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲಕೆತ್ತಿದ್ದು,ಲಾರಿಯೊಳಗೆ, ಲಾರಿ ಚಾಲಕ ಅರ್ಜುನ್ ನ ಮೃತದೇಹದ ಕಳೆಬರಹವು ಪತ್ತೆಯಾಗಿತ್ತು. ಇದರಿಂದ ನಾಪತ್ತೆಯಾಗಿದ್ದ ಇನ್ನಿಬ್ಬರ ಮೃತದೇಹ ದೊರೆಯುವ ವಿಶ್ವಾಸ ಎದುರಾಗಿತ್ತು.ಅದರಂತೆಯೇ ಕಾರ್ಯಾಚರಣೆಯ ವೇಳೆ ಮತ್ತೆರಡು ಮೂಳೆಗಳು ಪತ್ತೆಯಾಗಿದ್ದು ಅದು ಯಾರ ಮೂಳೆಗಳು ಎನ್ನುವುದು ಮಾತ್ರ ಡಿ ಎನ್ ಎ ಪರೀಕ್ಷೆಯ ಬಳಿಕ ತಿಳಿದು ಬರಬೇಕಿತ್ತು, ವೈದ್ಯಕೀಯ ಎಡವಟ್ಟಿಗೆ ಇಲ್ಲಿಯವರೆಗೆ ಡಿ ಎನ್ ಎ ವರದಿ ವಿಳಂಬವಾಗಿದ್ದು ನಾಪತ್ತೆಯಾದವರ ಕುಟುಂಬಸ್ಥರು ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ.

ಈ ಗುಡ್ಡ ಕುಸಿತ ದುರಂತಕ್ಕೆ  ಐ ಆರ್ ಬಿ ಕಂಪನಿಯ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣ ಎಂದು ಬ್ರಹ್ಮರ್ಷಿ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿಗಳಾದ ಹಾಗೂ ಈಡಿಗ ಸಮುದಾಯದ ಸ್ವಾಮೀಜಿ ಪ್ರಣವಾನಂದ ಸ್ವಾಮೀಜಿಯವರು ವಿರೋಧ ವ್ಯಕ್ತಪಡಿಸಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಪೊಲೀಸರು ಪ್ರಕರಣ ದಾಖಲಿಸದ ಕಾರಣ ಸ್ವಾಮೀಜಿ ನ್ಯಾಯಾಲಯದ ಮೊರೆ ಹೋಗಿದ್ದರು, ಸ್ವಾಮೀಜಿಯವರ ದೂರನ್ನು ಪುರಸ್ಕರಿಸಿದ  ಜೆ ಎಂ ಎಫ್ ಸಿ ನ್ಯಾಯಾಲಯ ಕಂಪನಿಯ ಎಂಟು ಜನರ ಮೇಲೆ ಎಫ್ ಐ ಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿದ ಸ್ವಾಮೀಜಿ ನ್ಯಾಯಾಲಯದ ಅದೇಶದಿಂದ ಗುಡ್ಡ ಕುಸಿತ ಪ್ರಕರಣದಲ್ಲಿ ನೋಂದವರಿಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ. ಶಿರೂರು ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದವರಿಗೆ ನ್ಯಾಯ ಕೊಡಿಸಿಯೇ ತಿರುತ್ತೇನೆ ಎಂದರು.

Leave a Reply

Your email address will not be published. Required fields are marked *