ದಾಂಡೇಲಿ: ಶ್ರೀ ಮಂಜುನಾಥ, ನಟರಾಜ,ಕೈಲಾಸವಾಸಿ,ಹರ,ಮುಕ್ಕಣ್ಣ,ರುದ್ರ ಎಂದೆಲ್ಲ ಕರೆಯಿಸಿಕೊಳ್ಳುವ ಶಿವ ನೀಡಿದ್ದನ್ನು ಬಹುಬೇಗ ಕರುರುಣಿಸುವ ಇಷ್ಟಾರ್ಥ ದೈವವಾಗಿದ್ದಾನೆ.ಅಂತಹ ಮಹಾಬಲೇಶ್ವರನ ಆರಾಧನೆಗೆ ಶಿವರಾತ್ರಿ ಹಬ್ಬ ದೇಶಾದ್ಯಂತ ಸಂಭ್ರಮ ಸಡಗರದಿಂದ ನಡೆಯಿತು.

ಹೌದು…ದಾಂಡೇಲಿ ತಾಲೂಕಿನ ಪ್ರಸಿದ್ಧ ಶಿವತಾಣ. ಅಂಬಿಕಾನಗರದ ನಾಗಝರಿ ಕೆಪಿಸಿ ವಿದ್ಯುತ್ ಉತ್ಪಾದನ ಘಟಕದಿಂದ ಸುಮಾರು ಒಂದು ಸಾವಿರಕ್ಕೂ ಅಧಿಕ ಮೆಟ್ಟಿಲುಗಳನ್ನು ಇಳಿದು ಬಂದರೆ ವಿಶೇಷವಾಗಿ ವರ್ಷಕ್ಕೊಮ್ಮೆ ದರ್ಶನ ಭಾಗ್ಯವನ್ನು ನೀಡುವ ಶ್ರೀ ಕವಳೇಶ್ವರನ ಸನ್ನಿಧಿಗೆ ಶಿವರಾತ್ರಿಯ ಅಂಗವಾಗಿ ಭಕ್ತ ಸಾಗರವೇ ಹರಿದು ಬಂದಿತು.

ಅದೇ ರೀತಿಯಲ್ಲಿ ಶಿವರಾತ್ರಿಯ ವಿಶೇಷ ದಿನವಾದ ಇಂದು ಪಶ್ಚಿಮ ಘಟ್ಟಗಳ ದಟ್ಟ ಕಾನನದ ಮಧ್ಯೆ ನೆಲೆನಿಂತ ಕವಳೇಶ್ವರನ ಜಾತ್ರೆಗೆ ತೆರಳುವುದೇ ಒಂದು ಸಂತಸ..ಸುತ್ತಲೂ ಹಚ್ಚ ಹಸಿರಿನ ಹಾಸಿಗೆ, ಕಾಡು ಪ್ರಾಣಿಗಳ ಸದ್ದು,ಮನಮೋಹಕ ಪಕ್ಷಿಗಳ ಕಲರವದ ಇಂಪು,ಪಕ್ಕದಲ್ಲೇ ಹರಿಯುವ ಕಾಳಿ ನದಿ,ಕವಳಾ ಗುಹೆಯನ್ನು ತಲುಪುವ ದಾರಿಮದ್ಯೆ ಭಯವಿದ್ದರು ಶಿವನಾಮಸ್ತುತಿಯೊಂದೆ ಧೈರ್ಯ ಎನ್ನುತ್ತಾರೆ ಭಕ್ತರು.
ದಾಂಡೇಲಿ, ಹಳಿಯಾಳ, ಜೋಯಿಡಾ ತಾಲೂಕು ಮಾತ್ರವಲ್ಲದೇ ಜಿಲ್ಲೆ ಹಾಗೂ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಭಕ್ತ ಜನರ ಪವಿತ್ರ ಯಾತ್ರಸ್ಥಳವಾದ ಕವಳೇಶ್ವರನ ಸನ್ನಿಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹ ಆಗಮಿಸಿತ್ತು. ಎಲ್ಲಿ ನೋಡಿದರೂ ಜನವೇ ಜನ, ಅತ್ತ ಇತ್ತ ಎಲ್ಲಿ ನೋಡಿದರೂ ಶಿವನಾಮವನ್ನು ಜಪಿಸಿ ಕವಳೇಶ್ವರನ ದರ್ಶನ ಪಡೆದು ಭಕ್ತರು ಕೃತಾರ್ಥರಾದರು.

ಸೂರ್ಯ ಉದಯದ ಮುನ್ನವೇ ಕವಳೇಶ್ವರನ ದರ್ಶನಕ್ಕಾಗಿ ಸರತಿ ಸಾಲು ಪಾರಂಭವಾಗಿತ್ತು, ದಾಂಡೇಲಿ ಬಸ್ ನಿಲ್ದಾಣದಿಂದ ಸರಿಸುಮಾರು 26 ಕಿ.ಮೀ ವರೆಗೆ ವಾಹನಗಳಲ್ಲಿ ಪ್ರಯಾಣಿಸಿ ನಂತರ ಅಲ್ಲಿಂದ ಕನಿಷ್ಟವೆಂದರೂ 3 ಕಿ.ಮೀ ನಷ್ಟು ಪಾದಯಾತ್ರೆಯ ಮೂಲಕ ಬೆಟ್ಟ ಗುಡ್ಡಗಳನ್ನು ಹತ್ತಿಳಿದು, ಕಡಿದಾದ ಕಣಿವೆಯಲ್ಲಿ ಸಾಗಿ, ಐನೂರಕ್ಕೂ ಅಧಿಕ ಮೆಟ್ಟಲುಗಳನ್ನು ಹತ್ತಿಳಿದು ಕವಳೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾದರು.
ಕಾಡಿನ ಮಧ್ಯೆ ಕವಳೇಶ್ವರನ ಸನ್ನಿಧಿಗೆ ಸಾಗುವ ಭಕ್ತ ಜನರಿಗೆ ಮಾರ್ಗ ಮಧ್ಯದಲ್ಲಿ ಭಕ್ತ ಜನರ ಮನತಣಿಸಲು ಬೆಲ್ಲ, ಪಾನೀಯ ಮತ್ತು ನೀರಿನ ವ್ಯವಸ್ಥೆಯನ್ನು ಸ್ವಯಂ ಸೇವಾ ಸಂಸ್ಥೆಗಳು ಕೈಗೊಂಡು ಶಿವಭಕ್ತರ ಸೇವೆ ಮಾಡಿದರು.

ಹಾಗೆಯೇ ದಾಂಡೇಲಿಯಿಂದ ಕವಳೇಶ್ವರಕ್ಕೆ ಹೋಗಲು ನಗರದ ಸಾರಿಗೆ ಸಂಸ್ಥೆಯವರು ಬಸ್ಸುಗಳ ವ್ಯವಸ್ಥೆ ಕೈಗೊಂಡು ಕವಳೇಶ್ವರ ದಿವ್ಯ ದರ್ಶನ ಪಡೆಯಲು ಸಹಕರಿಸಿದರು. ಅರಣ್ಯ ಇಲಾಖೆ ಕವಳೇಶ್ವರ ಸನ್ನಿಧಿಗೆ ಭಕ್ತರಿಗೆ ಕಾಡಿನ ರಸ್ತೆಯಲ್ಲಿ ತೆರಳಲು ಸಹಕಾರ ನೀಡಿದರು.

ದಾಂಡೇಲಿ ಉಪ ವಿಬಾಗದ ಪೋಲಿಸ್ ಉಪಾಧೀಕ್ಷಕ ಶಿವಾನಂದ ಮದರಖಂಡಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಚಂದ್ರಶೇಖರ್ ಹರಿಹರ ಮತ್ತು ಜೈಪಾಲ್ ಪಾಟೀಲ್ ನೇತೃತ್ವದಲ್ಲಿ ದಾಂಡೇಲಿ ಉಪ ವಿಭಾಗದ ಪಿಎಸೈಗಳಾದ ಮಹೇಶ ಮೇಲಗೇರಿ, ಮಹೇಶ ಮಾಳಿ,ಮಹಾದೇವಿ ನಾಯ್ಕೋಡಿ, ಕಿರಣ್ ಪಾಟೀಲ್, ಅಮೀನ್ ಅತ್ತಾರ, ವಿನೋದ್ ರೆಡ್ಡಿ, ಕೃಷ್ಣ ಗೌಡ ಅರಕೇರಿ, ಬಸವರಾಜ ಮಬನೂರು ಅವರ ಸಾರಥ್ಯದಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ ಒದಗಿಸಿದ್ದು ಭಕ್ತರಿಂದ ಶ್ಲಾಘನೆಗೆ ಪಾತ್ರವಾಯಿತು.


Leave a Reply