ಅಂಕೋಲಾ: ತಾಲೂಕಿನ ಪಾರಂಪರಿಕ ಸುಗ್ಗಿ ಆಚರಣೆಯು ಸಂಭ್ರಮ ಸಡಗರದಿಂದ ನೆರವೇರಿದ್ದು,ಸುಗ್ಗಿ ಕುಣಿತ ನೋಡಲುಬಂದ ಎಸ್ಪಿ ಎಂ ನಾರಾಯಣ ಹಾಗೂ ಶಾಸಕ ಸತೀಶ್ ಸೈಲ್ ಸುಗ್ಗಿ ತುರಾಯಿ ಧರಿಸಿ ಭರ್ಜರಿ ಸ್ಟೆಪ್ ಹಾಕುವ ಮೂಲಕ ಸಾಂಪ್ರದಾಯಿಕ ಕಲೆಯನ್ನು ಗೌರವಿಸಿದರು.

ಹೌದು…ಸ್ವಾತಂತ್ರ್ಯ ಹೋರಾಟದ ಭೂಮಿ,ಸಾಂಪ್ರದಾಯಿಕ ಕಲೆಗಳ ನಾಡು ಎಂದೆಲ್ಲ ಕರೆಯಿಸಿಕೊಳ್ಳುವ ಅಂಕೋಲಾ ತಾಲೂಕಿನಲ್ಲಿ ಗಮನ ಸೆಳೆಯುವ ಸುಗ್ಗಿ ಕುಣಿತ ಅತ್ಯಂತ ವೈಶಿಷ್ಟ್ಯತೆಯಿಂದ ಹಾಗೂ ಧಾರ್ಮಿಕತೆಯಿಂದ ಕೂಡಿದ್ದು,ಅದರದ್ದೇಯಾದ ಮಹತ್ವತೆಯನ್ನು ಹೊಂದಿದೆ. ಅದರಂತೆಯೇ ಹಾಲಕ್ಕಿ,ನಾಮಧಾರಿ, ಕೋಮಾರಪಂತ,ಮತ್ತಿತರ ಸಮುದಾಯದವರು ಸುಗ್ಗಿ ಕುಣಿತ ಪ್ರದರ್ಶಿಸಿ ಜನಮನ ತಣಿಸುತ್ತಾರೆ.

ಪ್ರತಿವರ್ಷವೂ ನಡೆಯುವ ಹಾಲಕ್ಕಿ ಸುಗ್ಗಿ.
ತಾಲೂಕಿನಲ್ಲಿ ಸುಗ್ಗಿ ಕುಣಿತಕ್ಕೆ ಬ್ರಿಟಿಷ ಅಧಿಕಾರಿಗಳಿಂದ ತಾಮ್ರಪಟಗಳ ಗೌರವಗಳಿಸಿದ ಏಕೈಕ ಸುಗ್ಗಿ ಎಂದರೆ ಅದು ಹಾಲಕ್ಕಿ ಸುಗ್ಗಿ ಅದರಂತೆಯೇ ಕೋಮಾರಪಂತ ಸಮಾಜದ ಸುಗ್ಗಿ ಮತ್ತು ನಾಮಧಾರಿ ಸಮಾಜದವರ ಸುಗ್ಗಿಯು ಅದ್ಬುತ ವಿಶೇಷತೆಗಳನ್ನು ಹೊಂದಿದೆ.
ತುರಾಯಿಧರಿಸಿದ ಎಸ್ಪಿ,ಶಾಸಕ.
ಸುಗ್ಗಿ ಕುಣಿತ ಪ್ರದರ್ಶನ ನೋಡಲು ಬಂದಿದ್ದ ಜಿಲ್ಲೆಯಲ್ಲಿಯೇ ಖಡಕ್ ಪೊಲೀಸ್ ವರಿಷ್ಠಾಧಿಕಾರಿ ಎಂದು ಹೆಸರಾಗಿರುವ ಎಂ ನಾರಾಯಣ ಹಾಗೂ ಶಾಸಕ ಸತೀಶ್ ಸೈಲ್ ಸುಗ್ಗಿ ತುರಾಯಿಗಳನ್ನು ಧರಿಸಿ ಸ್ಥಳೀಯ ಆಚರಣೆಗೆ ಗೌರವ ನೀಡಿದರು. ತಾಮ್ರ ಪಟದ ಬಗ್ಗೆ ಊರ ಗೌಡರಿಂದ ತಿಳಿದು ಹರ್ಷವ್ಯಕ್ತಪಡಿಸಿದರು.ಹಾಗೆಯೇ ಬೊಬ್ರುವಾಡ ನಾಮಧಾರಿ ಸಮಾಜದವರ ಸುಗ್ಗಿ ಕುಣಿತ ಪ್ರದರ್ಶಿಸಿ ಅಲ್ಲಿಯೂ ಸಹ ತುರಾಯಿ ಧರಿಸಿ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಸುಗ್ಗಿ ಕುಣಿತವನ್ನು ಆನಂದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಾಚೀನ ಕಲೆ, ನಮ್ಮ ಸಂಸ್ಕೃತಿಯನ್ನು ಸಾರುವ ಸುಗ್ಗಿ ಕುಣಿತದಂತಹ ನಮ್ಮ ಪೂರ್ವಜರ ಬಳುವಳಿಯನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿರುವುದು ಶ್ಲಾಘನೀಯ, ಅಂಕೋಲೆಯ ಮಣ್ಣಿನ ಕಂಪನ್ನು ಸಾರುವ ಇಂತಹ ಅಪರೂಪದ ಕಲೆಗಳು ಹಳ್ಳಿಯ ಸೊಗಡಿಗೆ ಹಿಡಿದ ಕೈಗನ್ನಡಿಯಾಗಿದೆ. ಬಣ್ಣ ಬಣ್ಣದ ತುರಾಯಿಗಳು,ಶಿಸ್ತಿನ ವೇಷಭೂಷಣಗಳು, ಕೈಯ್ಯಲ್ಲಿ ನವಿಲುಗರಿಯ ಗುಚ್ಛಗಳು ಹಾಗೂ ನೃರ್ತಿಸುವ ಕೋಲುಗಳು,ಕಾಲಿಗೆ ಸುಂದರವಾಗಿ ಸ್ಪರ್ಶಿಸಿರುವ ಗೆಜ್ಜೆಗಳು,ಕಿವಿಗೆ ಇಂಪು ನೀಡುವಂತೆ ಅಚ್ಚುಕಟ್ಟಾದ ಗುಮಟೆ ಪಾಂಗಗಳು ಒಟ್ಟಾರೆ ಅದ್ಬುತ ದೃಶ್ಯಗಳನ್ನು ಕಣ್ತುಂಬಿಕೊಳ್ಳುವಂತಹ ಸೌಬಾಗ್ಯ ನನ್ನದಿತ್ತು. ಸುಗ್ಗಿ ಕುಣಿತಕ್ಕೆ ಬ್ರಿಟಿಷ್ ಅಧಿಕಾರಿಗಳೇ ಮನಸೋತಿದ್ದರು ಎನ್ನುವುದನ್ನು ಕೇಳಿ ಅಚ್ಚರಿಯಾಯಿತು,ತಾಮ್ರಪಟವನ್ನು ನೋಡಿದರೆ ಇಲ್ಲಿಯ ನೆಲದ ‘ಗತ್ತು’ ಗೊತ್ತಾಯಿತು.ಒಟ್ಟಾರೆ ಸುಗ್ಗಿ ತುರಾಯಿ ಧರಿಸಿದ ಘಳಿಗೆಯಂತೂ ಮೈರೋಮಾಂಚನಕ್ಕೆ ಎಡೆಮಾಡಿಕೊಟ್ಟಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಗೌರವಗಳು,ಜನಮನ್ನಣೆಗಳು ಈ ಸುಗ್ಗಿ ಕುಣಿತಕ್ಕೆ ದೊರೆಯಲಿ.
ಎಂ ನಾರಾಯಣ್(ಐ ಪಿ ಎಸ್) ಪೊಲೀಸ್ ವರಿಷ್ಠಾಧಿಕಾರಿ,ಉತ್ತರ ಕನ್ನಡ ಜಿಲ್ಲೆ


Leave a Reply