ಕುಮಟಾ: ಮನೆಗೆ ಹೋಗುವ ತರಾತುರಿಯಲ್ಲಿ ಚಿನ್ನದ ಮಂಗಲಸೂತ್ರ ಇದ್ದ ಬ್ಯಾಗನ್ನು ಬಿಟ್ಟು ಮನೆಗೆ ಹೊರಟಿದ್ದ ಮಹಿಳೆಯ ಬ್ಯಾಗನ್ನು ಕಳೆದುಕೊಂಡ ಒಂದು ಗಂಟೆಯಲ್ಲೇ ಪತ್ತೆ ಹಚ್ಚಿ ಕಾರ್ಯಕ್ಷಮತೆ ಮೆರೆದಿರುವ ಕುಮಟಾ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಹೌದು… ಹುಬ್ಬಳ್ಳಿಯಿಂದ ಕುಮಟಾಕ್ಕೆ ಬಸ್ಸಿನಲ್ಲಿ ಬಂದ ವಾಲಗಳ್ಳಿ ನಿವಾಸಿ ಬೇಬಿ ಅಣ್ಣಪ್ಪ ವರ್ಣೇಕರ್ (50) ಎನ್ನುವ ಮಹಿಳೆ ಸೋಮವಾರ ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ಪಟ್ಟಣದ ಹೊಸ ಬಸ್ ನಿಲ್ದಾಣದ ಹೊರಾಂಗಣದಲ್ಲಿ ಲಗೇಜು ಸಮೇತ ಮೇಲೆ 40 ಗ್ರಾಂ ತೂಕದ ಬಂಗಾರದ ಮಂಗಳಸೂತ್ರ ಹಾಗೂ ಮೂರು ಸಾವಿರ ರೂಪಾಯಿ ನಗದು ಇರುವ ಬ್ಯಾಗನ್ನು ಅಲ್ಲಿ ನಿಲ್ಲಿಸಿದ್ದ ಬೈಕಿನಮೇಲೆ ಇರಿಸಿ ಇಟ್ಟು ಆಟೋಗೆ ಕಾಯುತ್ತಿದ್ದಳು ಎನ್ನಲಾಗಿದೆ. ಆಟೋ ಹತ್ತುವ ತರಾತುರಿಯಲ್ಲಿ ಲಗೇಜು ಮಾತ್ರ ತೆಗೆದುಕೊಂಡು ಬ್ಯಾಗನ್ನು ಅಲ್ಲಿಯೇ ಬಿಟ್ಟು ಮನೆಕಡೆ ತೆರಳಿದ್ದಳು, ಹಾಗೆಯೇ ಮನೆಗೆ ಹೋಗಿ ನೋಡಿದ್ದಾಗ ಬ್ಯಾಗ್ ಇಲ್ಲದಿರುವುದನ್ನು ಗಮನಿಸಿ ತಕ್ಷಣ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ ಅಲ್ಲಿ ನಿಲ್ಲಿಸಲಾಗಿದ್ದ ಬೈಕ್ ಇಲ್ಲದಿದ್ದರಿಂದ ಆತಂಕಗೊಂಡು ಕುಮಟಾ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ.ಈ ಕುರಿತು ತಕ್ಷಣ ಸ್ಪಂದಿಸಿದ ಕುಮಟಾ ಸಿಪಿಐ ಯೋಗೇಶ್ ಕೆ ಎಂ ಸಿಬ್ಬಂದಿಗಳಿಗೆ ಬ್ಯಾಗ್ ಪತ್ತೆ ಹಚ್ಚುವಂತೆ ಮಾರ್ಗದರ್ಶನ ನೀಡಿದ್ದಾರೆ.

ಈ ಬಗ್ಗೆ ಕಾರ್ಯಪೃವೃತ್ತರಾದ ಕುಮಟಾ ಠಾಣೆಯ ಪಿಎಸೈ ಸಾವಿತ್ರಿ ನಾಯಕ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಕಿರಣ ನಾಯ್ಕ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಬ್ಯಾಗ್ ಇಟ್ಟಿದ್ದ ಬೈಕ್ ಅನ್ನು ಒಂದು ಗಂಟೆಯಲ್ಲಿಯೇ ಪತ್ತೆ ಹಚ್ಚಿ ಬೇಬಿ ವೆರ್ಣೇಕರ್ ಅವರಿಗೆ ಹಿಂದಿರುಗಿಸಿದ್ದಾರೆ. ಕುಮಟಾ ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.


