ಶಿರಸಿ: ಜೆಡಿಎಸ್ ಮುಖಂಡ,ನಾಮಧಾರಿ ಸಮಾಜದ ಪ್ರಮುಖರಾದ ಪಟ್ಟಣದ ಮಾರಿಕಾಂಬ ನಗರದ ನಾರಾಯಣ ನಾಯ್ಕ (ಶಿಯಾಳ ನಾಯ್ಕ) ರವರ ಧರ್ಮಪತ್ನಿ ಸೀತಾ ನಾಯ್ಕ (60) ಬುಧವಾರ ಮಧ್ಯಾಹ್ನ ವಿಧಿವಶರಾಗಿದ್ದಾರೆ.

ಹೌದು..ಶಿರಸಿ,ಸಿದ್ದಾಪುರ ಕ್ಷೇತ್ರದ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ನಾರಾಯಣ ವಿ ನಾಯ್ಕರು(ಶಿಯಾಳ ನಾಯ್ಕ) ಪಕ್ಷ ಸಂಘಟನೆಯಲ್ಲಿ ಸದೃಢ ಹಿಡಿತ ಸಾಧಿಸಿದ್ದರು, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ,ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದವರು, ಹಾಗೆಯೇ ನಾಮಧಾರಿ ಸಮಾಜದ ಹಿರಿಯರು ಆಗಿರುವ ಇವರು, ಇವರ ಧರ್ಮಪತ್ನಿ ಸೀತಾ ನಾಯ್ಕ ಪತಿಯ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಬೆನ್ನೆಲುಬಾಗಿ ನಿಂತವರು,ವಿನಯಶೀಲತೆ, ಧಾರ್ಮಿಕತೆ ಮತ್ತು ಕುಟುಂಬಮುಖಿ ವ್ಯಕ್ತಿತ್ವಕ್ಕಾಗಿ ಪರಿಚಿತರಾಗಿದ್ದ ಸೀತಾ ನಾಯ್ಕರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕುಟುಂಬದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಹೊಂದಿದವರಾಗಿದ್ದರು.

ಸರಳತೆ, ಸತ್ಯನಿಷ್ಠೆ ಮತ್ತು ಕುಟುಂಬ ಮೌಲ್ಯಗಳಿಗೆ ಮಹತ್ವ ನೀಡುತ್ತಿದ್ದ ಸೀತಾ ನಾಯ್ಕರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುವವರಲ್ಲದಿದ್ದರೂ, ತಮ್ಮ ಪತಿ ಮತ್ತು ಕುಟುಂಬದ ಎಲ್ಲರಿಗೂ ಧೈರ್ಯಶಾಲಿಯಾಗಿ ನಿಂತಿದ್ದರು ಹಾಗೆಯೇ ಬಂಧುಗಳು ಹಾಗೂ ನೆರೆಹೊರೆಯವರ ಮೇಲೂ ಸದಾ ಪ್ರೀತಿಯಿಂದ ವರ್ತಿಸುತ್ತಿದ್ದ ಅವರ ನಡೆ-ನುಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ಮಧ್ಯಾಹ್ನ ಅಸುನೀಗಿದ್ದು,ಮೃತರು ಓರ್ವ ಪುತ್ರ,ಓರ್ವ ಪುತ್ರಿ, ಅಳಿಯ,ಸೊಸೆ,ಇಬ್ಬರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರಿಗೆ ಶಾಸಕ ಭೀಮಣ್ಣ ನಾಯಕ ಸೇರಿದಂತೆ ಅನೇಕಾರು ಹಿರಿಯ ಗಣ್ಯರು, ಸಮಾಜ ಬಾಂಧವರು ಸಂತಾಪ ಸೂಚಿಸಿದ್ದಾರೆ.ಮಾರಿಕಾಂಬಾ ನಗರದ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು,ಸಾಯಂಕಾಲ 7.30 ರ ಸುಮಾರಿಗೆ ಪಟ್ಟಣದ “ನೆಮ್ಮದಿಧಾಮ” ರುದ್ರಭೂಮಿಯಲ್ಲಿ ಅಂತಿಮಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


