ಅಂಕೋಲಾ: ತಾಲೂಕಿನ ಬೆಳಾಬಂದರ ಗ್ರಾಮದ ಗ್ರಾಮದೇವ ವೀರಭದ್ರೇಶ್ವರ(ಬೀರದೇವ) ದೇವರ ಭಜನೆ ಸಪ್ತಾಹವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತೀ ವೈಭವಪೂರ್ವಕವಾಗಿ ನೆರವೇರಿತು.

ಹೌದು…ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಾಬಂದರ ಗ್ರಾಮದಲ್ಲಿ ವೀರಭದ್ರೇಶ್ವರ ದೇವರ ಭಜನಾ ಸಪ್ತಾಹದ ಅಂಗವಾಗಿ ಶ್ರೀ ದೇವರ ರಥೋತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಈ ಸಂದರ್ಭದಲ್ಲಿ ಗ್ರಾಮದ ರಥ ತೆರಳುವ ರಸ್ತೆಯುದ್ದಕ್ಕೂ ತಳಿರು ತೋರಣಗಳಿಂದ ಶೃಂಗಾರಿಸಲಾಗಿದ್ದು,ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು,ಬಣ್ಣ-ಬಣ್ಣದ ರಂಗೋಲಿ ನೋಡುಗರ ಕಣ್ಮನ ಸೆಳೆಯಿತು,ರಥದ ಮುಂಬಾಗದಲ್ಲಿ ಸ್ಥಳೀಯರಿಂದಲೇ ಹೇಳಲಾಗುತ್ತಿದ್ದ ಭಜನೆ ಗೀತೆಗಳು,ಪಂಚಾವಾದ್ಯಗಳ ಇಂಪು ಕೇಳುಗರನ್ನು ಮಂತ್ರಮುಗ್ದರನ್ನಾಗಿಸಿತ್ತು.

ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು,ಬಿರದೇವರ ರಥವನ್ನು ಗೌಡರೊಂದಿಗೆ ಊರಿನ ಯುವಕರೇ ಹೊತ್ತೊಯ್ದಿದ್ದು ಮಾತ್ರ ಯುವಕರ ಒಗ್ಗಟ್ಟಿಗೆ ಸಾಕ್ಷಿಯಾಯಿತು, ಒಟ್ಟಾರೆ ಬಿರದೇವರ ರಥೋತ್ಸವವು ಗ್ರಾಮದಲ್ಲಿ ಸಂಭ್ರಮ ಸಡಗರಕ್ಕೆ ಸಾಕ್ಷಿಯಾಯಿತು.

ಏಳು ದಿನಗಳ ಅದ್ದೂರಿತನ!ಕಳೆದ ಏಳು ದಿನಗಳಿಂದ ಪ್ರಾರಂಭವಾದ ಭಜನಾ ಕಾರ್ಯಕ್ರಮವು ಪ್ರತಿನಿತ್ಯವೂ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ನಾಟಕ,ಆರ್ಕೆಸ್ಟ್ರಾ,ರಂಗೊಲಿ ಸ್ಪರ್ಧೆ ಇನ್ನಿತರ ಹಲವಾರು ಕಾರ್ಯಕ್ರಮಗಳ ಮೂಲಕ ಒಂದು ವಾರಗಳ ಕಾಲ ಅತ್ಯಂತ ಭಕ್ತಿ-ಭಾವದೊಂದಿಗೆ,ಮನರಂಜನೆಯ ಕೇಂದ್ರವಾಗಿ ಬೆಳಾಬಂದರ ಗ್ರಾಮ ಹೊರಹೊಮ್ಮಿತು.

ಯಕ್ಷಗಾನದೊಂದಿಗೆ ಭಜನೆ ಸಪ್ತಾಹ ಸಂಪನ್ನ!
ಶ್ರೀ ದೇವರ ರಥವೂ ಸ್ವಸ್ಥಾನಕ್ಕೆ ಮರಳುತ್ತಿದ್ದಂತೆ, ಮಹಾಪೂಜೆ ನೆರವೇರಿ ಪ್ರಸಾದ ವಿತರಣೆ ಮಾಡಲಾಗುತ್ತದೆ,ನಂತರದಲ್ಲಿ ದೇವರ ಫಲಾವಳಿಗಳ ಸವಾಲು ಮಾಡಲಾಗುತ್ತದೆ, ಬಳಿಕ ಸ್ಥಳೀಯ ಕಲಾವಿದರ ಕೂಡುವಿಕೆಯಲ್ಲಿ ‘ಚಂದ್ರಾವಳಿ ವಿಲಾಸ’ಎನ್ನುವ ಯಕ್ಷಗಾನವನ್ನು ಪ್ರದರ್ಶಿಸಿ ಭಜನಾ ಸಪ್ತಾಹ ಸಂಪನ್ನಗೊಳ್ಳುತ್ತದೆ.


