ಕುಮಟಾ: ತಾಲೂಕಿನ ಗೋಕರ್ಣದ ಸಾಣಿಕಟ್ಟಾ ನಾಗರಬೈಲ ಉಪ್ಪಿನ ಮಾಲಿಕರ ಸಹಕಾರಿ ಸಂಘದ ಪಾರಂಪರಿಕ ಉಪ್ಪೋತ್ಪಾದನೆಯ ಪ್ರಾರಂಭೋತ್ಸವವು ನಾರಣಾಪುರ ಘಟಕದಲ್ಲಿ ಶನಿವಾರ ಶಾಸ್ತ್ರೋಕ್ತವಾಗಿ ನೆರವೇರಿತು.

ಹೌದು… ತಾಯಿಗಿಂದ ಬಂಧುವಿಲ್ಲ,ಉಪ್ಪಿಗಿಂತ ರುಚಿಯಿಲ್ಲ ಎನ್ನುವ ನಾಣ್ಣುಡಿಯಂತೆ ಮಾನವನ ಜೀವನದಲ್ಲಿ ಅತ್ಯಂತ ಮಹತ್ವತೆಯಿಂದ ಕೂಡಿರುವ ಉಪ್ಪಿನ ಉತ್ಪಾದನೆಯ ಪ್ರಾರಂಭೋತ್ಸವವನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡ ನಾಗರಬೈಲ್ ಉಪ್ಪಿನ ಮಾಲಿಕರ ಸಹಕಾರಿ ಸಂಘದ ವತಿಯಿಂದ ಭೂಮಿ ಪೂಜೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಸಹಕಾರಿ ಸಂಘದ ಅಧ್ಯಕ್ಷರಾದ ಅರುಣ ನಾಡಕರ್ಣಿ ಸ್ಥಳದೇವರ ಪೂಜೆಯೊಂದಿಗೆ ಈ ಕೈಂಕರ್ಯಗಳಲ್ಲಿ ಯಾವುದೇ ವಿಘ್ನ ಬಾರದಂತೆ ಪೂಜೆ ಸಲ್ಲಿಸಿ ಪ್ರಾರಂಭೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಶತಮಾನಗಳ ಇತಿಹಾಸವಿರುವ ನಮ್ಮ ಉಪ್ಪಿನ ಆಗರಗಳು 1952 ರಲ್ಲಿ ಸಹಕಾರಿ ಸಂಘಗಳ ನಿಬಂಧನೆಗಳ ಮೂಲಕ ಸಂಘವನ್ನು ನೋಂದಾಯಿಸಿಕೊಂಡು ಭಾರತ ಸರ್ಕಾರದ ಮಾನ್ಯತೆಯೊಂದಿಗೆ ವೈಜ್ಞಾನಿಕವಾಗಿ ಉಪ್ಪಿನ ಉತ್ಪಾದನೆ ಮಾಡುತ್ತಾ ಬಂದಿದೆ.ಪ್ರತಿವರ್ಷ ಸರಾಸರಿ 6ರಿಂದ 8 ಸಾವಿರ ಟನ್ನಿಗಿಂತಲೂ ಹೆಚ್ಚಿನ ಉಪ್ಪು ಉತ್ಪಾದಿಸುತ್ತಿದೆ.

ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ 1993ರಲ್ಲಿ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಆಯೋಡಿನಯುಕ್ತ ಉಪ್ಪನ್ನು ಪ್ರಾರಂಭಿಸಿದ ಉತ್ಪಾದನಾ ಘಟಕ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ನಮ್ಮ ಆಗರಗಳಲ್ಲಿ ಕೆಲಸಮಾಡುವ ಕಾರ್ಮಿಕರನ್ನು ನಾವು ಎಂದಿಗೂ ಕೆಲಸಗಾರರಂತೆ ಕಂಡವರಲ್ಲ ಬದಲಾಗಿ ಅವರು ನಮ್ಮ ಕುಟುಂಬದವರೆ ಆಗಿದ್ದಾರೆ ಹಾಗೆಯೇ ಆಗರದಿಂದ ಉಪ್ಪನ್ನು ಅತ್ಯಂತ ಹದವಾಗಿ ತೆಗೆಯುವ ಅವರು ಕುಶಲಕರ್ಮಿಗಳೆ ಆಗಿದ್ದಾರೆ.ಅವರಿಗೆ ಮತ್ತು ಅವರ ಕುಟುಂಬಗಳಿಗೆ ಶೈಕ್ಷಣಿಕ ನೆರವು,ಆರೋಗ್ಯ ತಪಾಸಣೆ,ಬೋನಸ್ ಸೇರಿದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಮುದ್ದಣ್ಣ ನಾಯ್ಕ, ಸಂಘದ ಕಾರ್ಯದರ್ಶಿ ಅನಿಲ ನಾಡಕರ್ಣಿ, ಅರ್ಚಕ ರವಿಕಿರಣ ಭಟ್ಟ, ಉತ್ಪಾದನಾ ಮೇಲ್ವಿಚಾರಕರಾದ ದುರ್ಗೇಶ ಕಾಗಾಲ, ನವೀನ ನಾಡಕರ್ಣಿ, ಸೌರಭ ನಾಡಕರ್ಣಿ,ಶ್ರೀಪಾದ ಗುಣಿ, ಅರವಿಂದ ನಾಯಕ, ನಿವೃತ್ತ ಉತ್ಪಾದನಾ ಅಧಿಕಾರಿ ಚಂದ್ರಶೇಖರ ನಾಯಕ, ಶಿವಯ್ಯ ಗೌಡ, ಕೇಂದ್ರ ಸರಕಾರದ ಉಪ್ಪಿನ ಇಲಾಖಾ ಸಿಬ್ಬಂದಿ ಶ್ರೀನಿವಾಸ ನಾಯ್ಕ ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.


