ಹೊನ್ನಾವರ: ಗತ್ತು,ಗಾಂಭೀರ್ಯದ ಚಂದಾವರ ಸೀಮೆಯ ಹನುಮಂತ ದೇವರು ವರ್ಷವಿಡಿ ತನ್ನ ಭಕ್ತರ ಮನೆಗೆ ತೆರಳಿ ಸಲಹುವ ದೇವನಾಗಿದ್ದು,ಸೀಮೆಯ ಪ್ರತಿಯೋರ್ವರ ಮನೆ ಮನೆ ಬಾಗಿಲಿಗೆ ತೆರಳಿ ಆಶೀರ್ವದಿಸುತ್ತಾನೆ.ಜೈ ಶ್ರೀರಾಮ ಘೋಷಣೆ ಕೂಗುತ್ತಾ ಭಕ್ತಿಬಾವಪರವಶರಾಗಿ ದೇವರ ಪಲ್ಲಕ್ಕಿ ಹೊತ್ತು ಸಾಗುವ ಸ್ಥಳೀಯ ಯುವಕರ ಉತ್ಸಾಹ ಮಾತ್ರ ಹೇಳತೀರದು.

ಹೌದು….ಚಂದಾವರ ಸೀಮೆಯ ಹನುಮಂತ ದೇವರು ಎಂದರೆ ಸುತ್ತಲಿನ ಪ್ರದೇಶದ ಶಕ್ತಿಶಾಲಿ ದೇವರು,ಸದಾ ಪಲ್ಲಕ್ಕಿಯಲ್ಲಿ ಊರೂರು ಸುತ್ತುವ ಹನುಮಂತನಿಗೆ ಅದ್ದೂರಿ ಸ್ವಾಗತ ನೀಡುತ್ತಾರೆ ಸ್ಥಳೀಯರು,ಪ್ರತಿಯೊಂದು ಊರಿನ ಮುಖ್ಯಸ್ಥರ ಒಗ್ಗೂಡುವಿಕೆಯಲ್ಲಿ ದೇವರ ಮೆರವಣಿಗೆಯ ದಿಕ್ಕನ್ನು ನಿರ್ಣಯಿಸುತ್ತಾರೆ.ಭಯ ಭಕ್ತಿಯೊಂದಿಗೆ ಚಂದಾವರ ಸೀಮೆಯ ಹನುಮಂತ ದೇವರನ್ನು ಪೂಜಿಸುವ ಇಲ್ಲಿಯವರು,ತಮ್ಮ ಮನೆಗೆ ಬರುವಂತೆ ತೆಂಗಿನಕಾಯಿ ನೀಡಿ ಅಮಂತ್ರಿಸುತ್ತಾರೆ, ಮನೆಯಂಗಳಕ್ಕೆ ಸಗಣಿ ಸಾರಿಸಿ,ತಳಿರು ತೋರಣಗಳಿಂದ ಶೃಂಗರಿಸಲಾಗುತ್ತದೆ, ಕರೆದೊಡನೆ ಮನೆಗೆ ಬರುವ ಹನುಮಂತ ದೇವರ ಪಲ್ಲಕ್ಕಿ ಪ್ರತಿವರ್ಷ ಆಷಾಢ ಶುದ್ದಿ ಏಕಾದಶಿಯಂದು ಸೀಮೆ ಸುತ್ತಾಡಿ ಬಂದು ತನ್ನ ಆಸ್ಥಾನದಲ್ಲಿ ತಂಗುವ ಸಂಪ್ರದಾಯ.

ಅಂದಿನಿಂದ ದೀಪಾರಾಧನೆ ಅಮವಾಸ್ಯೆಯ ನಂತರದಲ್ಲಿ ನಡೆಯುವ ದೀಪೋತ್ಸವ ಮುಗಿಸಿ ಮತ್ತೆ ಹನುಮಂತ ದೇವರು ಪಲ್ಲಕ್ಕಿ ಮೂಲಕ ಸೀಮೆಯ ಹಳ್ಳಿ-ಹಳ್ಳಿಗೆ ತೆರಳುವ ಸಂಪ್ರದಾಯ.ದೇವರ ಪಲ್ಲಕ್ಕಿ ಒಂದು ಊರಿನಲ್ಲಿ ಎಂಟರಿಂದ ಹತ್ತು ದಿನ ಮಾತ್ರ ತಂಗುವುದು, ಒಂದು ದಿನಕ್ಕೆ ಸರಿಸುಮಾರು 25 ರಿಂದ 30 ಮನೆಗಳಿಗೆ ತೆರಳುವ ದೇವರ ಪಲ್ಲಕ್ಕಿಯ ಆರಾಧನೆ ನೋಡಲು ಎರಡು ಕಣ್ಣು ಸಾಲದು ಎನ್ನುತ್ತಾರೆ ಸ್ಥಳೀಯರು.
ಚಂದಾವರ ಹನುಮಂತ ದೇವರ ಸೀಮೆಯ ಗ್ರಾಮಗಳ ವ್ಯಾಪ್ತಿ ಯಾಣದಿಂದ 70 ಹಾಗೂ ಕುಚ್ಚಿನಾಡವರೆಗೆ 30 ಹಳ್ಳಿಗಳು ಸೇರಿ ಒಟ್ಟೂ ನೂರು ಹಳ್ಳಿಗಳಾಗುತ್ತವೆ. ಪ್ರತೀ ವರ್ಷ ತನ್ನ ಸೀಮೆಯ ಗ್ರಾಮಗಳಿಗೆ ಸವಾರಿ ತೆರಳುವ ದೇವರ ಪಲ್ಲಕ್ಕಿ ಎಲ್ಲ ಗ್ರಾಮಗಳನ್ನು ಮುಗಿಸಲು ಎಂಟು ವರ್ಷಗಳೆ ಬೇಕು ಎನ್ನಲಾಗಿದೆ.ಪ್ರಸ್ತುತ ಹೊದ್ಕೆಶಿರೂರು ಬಳಿ ಇರುವ ಹನುಮಂತ ದೇವರ ಪಲ್ಲಕ್ಕಿ ರಾತ್ರಿ ದುರ್ಗಾಪರಮೇಶ್ವರಿ(ಅಮ್ಮನವರು) ದೇವಸ್ಥಾನದಲ್ಲಿ ತಂಗಲಿದ್ದು,ಹೊದ್ಕೆಶಿರೂರು ಗ್ರಾಮದ ಬಳಿಕ ಮುಗ್ವಾ ಗ್ರಾಮಕ್ಕೆ ತೆರಳಲಿದೆ.

ಪಲ್ಲಕ್ಕಿ ತಂಗುವ ಊರಲ್ಲಿ ಮಾಂಸಹಾರ ನಿಷೇಧ!
ಮಡಿ,ಮೈಲಿಗೆಗೆ ಪ್ರಾಮುಖ್ಯತೆ ನೀಡುವ ಹನುಮಂತ ದೇವರ ಪಲ್ಲಕ್ಕಿ ಊರಿಗೆ ಅಗಮಿಸುತ್ತಲೇ ಸಮಸ್ತ ಊರಿನವರು ದೇವರ ಪಲ್ಲಕ್ಕಿ ಇದ್ದಷ್ಟು ದಿನ ಮಾಂಸಹಾರ ತ್ಯೆಜಿಸುತ್ತಾರೆ, ಒಂದು ಊರಿನಲ್ಲಿ ಎಲ್ಲಾ ಮನೆಗಳಿಗೆ ತೆರಳಿ ಪೂರ್ಣಗೊಂಡ ಬಳಿಕ ಮತ್ತೊಂದು ಊರಿನವರು ಕರೆಯಲು ಬರುತ್ತಾರೆ,ತಮ್ಮ ತಮ್ಮ ಊರಿನಿಂದ ದೇವರ ಪಲ್ಲಕ್ಕಿಯನ್ನು ಕಳುಹಿಸುವ ದಿನ ಅತೀ ಬೇಸರ ಅಂದರೆ ಹೆಣ್ಣನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವಂತೆ ದುಃಖ ಆಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಚಂದಾವರ ಹನುಮಂತನ ಆಟ ಬಲ್ಲವರಾರು?
ಸಾವಿರಾರು ವರ್ಷಗಳ ಹಿಂದೆ ಹಾಲಕ್ಕಿ ಒಕ್ಕಲಿಗ ಸಮಾಜದ ವ್ಯಕ್ತಿಯೊಬ್ಬರಿಗೆ ಹನುಮಂತ ದೇವರ ಮೂಲ ಮೂರ್ತಿ ದೊರೆಯಿತು,ಹಾಗೆಯೇ ಅದನ್ನು ಪ್ರತಿಷ್ಠಾಪಿಸಲಾಯಿತು ಎನ್ನುವ ಪ್ರತೀತಿ ಇದೆ.
ಈ ಹಿಂದೆ ಸೇತುವೆ ಇಲ್ಲದ ಸಂದರ್ಭದಲ್ಲಿ ಹಳ್ಳಕೊಳ್ಳಗಳಲ್ಲಿ ನೀರು ತುಂಬಿಕೊಂಡ ವೇಳೆಯಲ್ಲಿ ಎಂದೆಂದೂ ಕಾಲು ಸಂಕ, ದೋಣಿ ಹತ್ತದ ಹನುಮಂತ ತನ್ನ ಯಾವೊಬ್ಬ ಭಕ್ತನಿಗೂ ಸ್ವಲ್ಪವೂ ಹಾನಿಯಾಗದ ರೀತಿಯಲ್ಲಿ ದಡ ಮುಟ್ಟಿಸಿದ ಇತಿಹಾಸ ಹನುಮಂತನದ್ದು ಎನ್ನುತ್ತಾರೆ ಇಲ್ಲಿಯ ಹಿರಿಯರು. ಪ್ರತಿಯೊಬ್ಬರ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ಹನುಮ ಎಂದರೆ ಸೀಮೆಯ ಜನರ ಪಾಲಿನ ಅದೃಷ್ಟದೇವ ಎನ್ನಲಾಗಿದೆ.


Leave a Reply