ಅಂಕೋಲಾ:ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಪ್ರಯತ್ನಗಳು ನಡೆಯುತ್ತಲೇ ಇವೆ. ನಿಮ್ಮ ಜನಾಂಗದ ಜೊತೆಯಲ್ಲಿ ಕುಣಬಿಗಳು,ಗೌಳಿಗಳು ಸೇರಿದಂತೆ ಇತರೆ ಕೆಲವು ಜನಾಂಗಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ವಿಚಾರಗಳು ಚರ್ಚೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ನಿರಂತರವಾಗಿ ಸಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಶಿರಸಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ನಿಯೋಗದ ಜೊತೆ ಮಾತನಾಡಿ ಹಾಲಕ್ಕಿ ಜನಾಂಗದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲೇಬೇಕು ಎನ್ನುವ ಇಚ್ಛೆ ಇದೆ. ಆ ಪ್ರಕಾರವಾಗಿ ಕೇಂದ್ರ ಸರ್ಕಾರದಲ್ಲಿಯೂ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಸಂಬಂಧಿಸಿದ ಅಧಿಕಾರಿ ಮಂಜುನಾಥ್ ಜೊತೆ ನಾನು ಚರ್ಚಿಸಿದ್ದೇನೆ. ಒಂದು ಜನಾಂಗಾವನ್ನು ಈ ರೀತಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಾಗ ಅದರದೇ ಆದ ತಾಂತ್ರಿಕ ಕಾರಣಗಳು ಇರುತ್ತವೆ. ಜೊತೆಗೆ ಅಧ್ಯಯನಗಳು ಅಗತ್ಯವಾಗಿರುತ್ತವೆ. ಈ ಪ್ರಯತ್ನಗಳನ್ನು ಈ ಹಿಂದೆಯೇ ಮಾಡಿಯಾಗಿದೆ. ಈಗಲೂ ನನ್ನ ಕ್ಷೇತ್ರದಲ್ಲಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿರುವ ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ವ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.
ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಮಾತನಾಡಿ ನಮ್ಮ ಸಮಾಜ ತಮಗೆ ತಿಳಿದಿರುವಂತೆ ಹಲವಾರು ವರ್ಷಗಳಿಂದ ಬಹಳ ಹಿಂದುಳಿದಿದ್ದು ನಮ್ಮ ಜನಾಂಗಕ್ಕೂ ಆದ್ಯತೆ ಸಿಗುವ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ವಿಚಾರವನ್ನು ಕಳೆದ ಹಲವಾರು ವರ್ಷಗಳಿಂದ ಹೇಳುತ್ತಲೇ ಬಂದಿದ್ದೇವೆ. ಆದರೆ ಆ ವಿಚಾರಗಳು ವಿಚಾರವಾಗಿ ಉಳಿದಿವೆ. ಪ್ರಯತ್ನಗಳನ್ನು ಕೆಲವರು ಮಾಡಿದ್ದಾರೆ. ಆದರೆ ಈವರೆಗೂ ಆ ಕಾರ್ಯ ಮಾತ್ರ ಸಂಪೂರ್ಣಗೊಂಡಿಲ್ಲ. ಹಾಲಕ್ಕಿ ಸಮಾಜದವರು ಹಿಂದುಳಿದವರಾಗಿದ್ದು ತಮ್ಮ ಪ್ರಯತ್ನದ ಮೂಲಕವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಾರ್ಯವಾಗಲೇಬೇಕು ಎಂದರು. ಈ ಸಂದರ್ಭದಲ್ಲಿ ಪ್ರಕಾಶ್ ಗೌಡ,ಮಂಗೂ ಗೌಡ ಸಣ್ಣಪ್ಪ ಗೌಡ,ಮಂಕಾಳಿ ಗೌಡ, ಶಂಕರ್ ಗೌಡ ಹೆಗ್ರೆ, ಬಲಿಂದ್ರ ಗೌಡ ಮೂಲೆಕೇರಿ, ಕೋಶಾಧ್ಯಕ್ಷ ಪರಮೇಶ್ವರ ಗೌಡ ಹೊನ್ನಾವರ, ವಿಷ್ಣು ಗೌಡ ಮಾದೇವ ಗೌಡ, ಬೆಳಂಬರ ಶಂಕರ್ ಗೌಡ ಬೆಳೆಸೆ,ಬಿಎಸ್ ಗೌಡ, ಕಾರ್ಯದರ್ಶಿ ಪುರುಷೋತ್ತಮ್ ಗೌಡ ರಮಕಾಂತಗೌಡ, ಆರತಿ ಗೌಡ ಸೇರಿದಂತೆ ಹಲವಾರು ಮಹಿಳೆಯರು ಪ್ರಮುಖರು ಉಪಸ್ಥಿತರಿದ್ದರು.


Leave a Reply