Spread the love

ಕಾರವಾರ: ಅಧಿಕಾರ ದುರ್ಬಳಕೆ ಹಾಗೂ ಕರ್ತವ್ಯಲೋಪದಡಿ ಅಮಾನತ್ತು ಗೊಂಡಿದ್ದ ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರರ ಅಮಾನತ್ತು ಆದೇಶಕಿದ್ದ ತಡೆಯಾಜ್ಞೆಯನ್ನು ಧಾರವಾಡದ ಉಚ್ಚನ್ಯಾಯಾಲಯ ತಿರಸ್ಕರಿಸಿ,ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂದು ಪೌರಾಡಳಿತ ಇಲಾಖೆಗೆ ಸೂಚಿಸಿದ್ದು, ಇಲಾಖೆ ತನ್ನ ಆದೇಶವನ್ನು ಸಮರ್ಥಿಸಿಕೊಂಡಂತೆ ಎಚ್ ಅಕ್ಷತಾ ಅವರನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಉಚ್ಛನ್ಯಾಯಾಲಯದ ಆದೇಶದಲ್ಲಿ ಏನಿದೆ?

ಹೌದು… ಅಂಕೋಲಾ ಪುರಸಭೆಯಲ್ಲಿ ಅಧಿಕಾರ ದುರ್ಬಳಕೆ ಹಾಗೂ ಕರ್ತವ್ಯಲೋಪ ಎಸಗಿದ್ದ ಬಗ್ಗೆ ಆರೋಪ ಎದುರಿಸುತ್ತಿದ್ದ ಮುಖ್ಯಾಧಿಕಾರಿ ಎಚ್ ಅಕ್ಷತಾ ಹಾಗೂ ಕಿರಿಯ ಅಭಿಯಂತರರ ವಿರುದ್ಧ ಪುರಸಭೆ ಜನಪ್ರತಿನಿಧಿಗಳು ಜಿಲ್ಲಾಧಿಕಾರಿ ಹಾಗೂ ಪೌರಾಡಳಿತ ಇಲಾಖೆಗೆ ದೂರಿದ್ದರು,ಈ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆನಡೆಸಿ ಉತ್ತರಿಸುವಂತೆ ಪುರಸಭೆ ಮುಖ್ಯಾಧಿಕಾರಿ ಎಚ್ ಅಕ್ಷತಾ ಅವರಿಗೆ ನೋಟಿಸ್ ನೀಡಿದ್ದರು,ಸಮಂಜಸವಲ್ಲದ ಉತ್ತರ ನೀಡಿದ್ದರಿಂದ ಕಾಲಾವಕಾಶ ನೀಡಿ ಅಮಾನತ್ತುಗೊಳಿಸಿ ವರ್ಗಾವಣೆ ಮಾಡಿದ್ದರು. ನಂತರ ಇಲಾಖೆಯ ಆದೇಶದ ವಿರುದ್ಧ ಮುಖ್ಯಾಧಿಕಾರಿ ಎಚ್ ಅಕ್ಷತಾ ಹೈಕೋರ್ಟ್ ಮೊರೆ ಹೋಗಿದ್ದರು, ಉಚ್ಛ ನ್ಯಾಯಾಲಯ ಅಮಾನತ್ತು ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಕಾಲಾವಕಾಶ ಕುರಿತಂತೆ ಪೌರಾಡಳಿತ ಇಲಾಖೆಗೆ ಸ್ಪಷ್ಟನೆ ಕೇಳಿತ್ತು,ಅದರಂತೆಯೇ ಮುಖ್ಯಾಧಿಕಾರಿಯವರಿಗೆ ಕಾಲಾವಕಾಶ ನೀಡಿಯೇ ಅಮಾನತ್ತು ಮಾಡಿರುವ ಬಗ್ಗೆ ಇಲಾಖೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು,ಈ ಕುರಿತಂತೆ ನವೆಂಬರ್ 6 ಗುರುವಾರ ನ್ಯಾಯಮೂರ್ತಿ ನಾಗಪ್ರಸನ್ನ ರವರು ಅಮಾನತ್ತು ಆದೇಶಕ್ಕೆ ನೀಡಿದ್ದ  ತಡೆಯಾಜ್ಞೆಯನ್ನು ತಿರಸ್ಕರಿಸಿ ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿಯಾದ ಅಕ್ಷತಾ ಎಚ್ ಮತ್ತು ಕಿರಿಯ ಅಭಿಯಂತರರು ಆಡಳಿತ ನಿರ್ವಹಣೆಯಲ್ಲಿ ಕರ್ತವ್ಯ ಲೋಪವೆಸಗಿರುವ ಹಾಗೂ ಇತರೆ ಆರೋಪಗಳ ಕುರಿತು ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಉಲ್ಲೇಖ (1)ರ ಪ್ರಸ್ತಾವನೆಯನ್ವಯ, ಸದರಿ ನೌಕರರಿಗೆ ಉಲ್ಲೇಖ (2)ರಲ್ಲಿ ಕಾರಣ ಕೇಳುವ ನೋಟೀಸ್ ನೀಡಲಾಗಿರುತ್ತದೆ. ಸದರಿ ನೋಟೀಸಿಗೆ ಆರೋಪಿತ ನೌಕರರು ಉಲ್ಲೇಖ (3)ರಂತೆ ನೀಡಿರುವ ಸಮಜಾಯಿಷಿಯನ್ನು ಪರಿಗಣಿಸಿ, ನಂತರ ನಿಯಮಾನಸಾರ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದರು.

ಈ ಆದೇಶದ ಬೆನ್ನಲ್ಲೇ ಅಮಾನತ್ತು ಮಾಡಿ ವರ್ಗಾವಣೆ ಮಾಡಿರುವ ಆದೇಶವನ್ನು ಪೌರಾಡಳಿತ ಇಲಾಖೆ ಸಮರ್ಥಿಸಿಕೊಂಡಿದ್ದು ನ್ಯಾಯಾಲಯದ ಸೂಚನೆಯಂತೆ ಪರಿಶೀಲಿಸಲಾಗಿ, ಮಾನ್ಯ ನ್ಯಾಯಾಲಯದ ಆದೇಶವನ್ನು ಪರಿಗಣನೆಗೆ ತೆಗೆದುಕೊಂಡು ಪ್ರಕರಣದ ಕುರಿತ ಆರೋಪಗಳಿಗೆ ನೌಕರರು ನೀಡಿರುವ ಸಮಜಾಯಿಷಿಯನ್ನು ಮತ್ತು ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಜಿಲ್ಲಾಧಿಕಾರಿಗಳ ವರದಿಯಲ್ಲಿ ಆರೋಪಿತ ನೌಕರರು ಕರ್ತವ್ಯಲೋಪ ಎಸಗಿರುವುದು ಸ್ಪಷ್ಟವಾಗಿರುತ್ತದೆ. ಹಾಗೂ ಉಲ್ಲೇಖ (5)ರ ಸರ್ಕಾರದ ಪತ್ರದಲ್ಲಿ ಪ್ರಕರಣದ ಕುರಿತು ಕೈಗೊಂಡ ಕ್ರಮದ ಮಾಹಿತಿಯನ್ನು ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.

ಆದ್ದರಿಂದ, ಸದರಿ ನೌಕರರ ಆರೋಪಗಳ ಕುರಿತು ಇಲಾಖಾ ವಿಚಾರಣೆ ಮುಗಿಯುವವರೆಗೂ, ಸಾಕ್ಷಿ ನಾಶ ಆಗದಂತೆ, ಎಚ್ಚರಿಕೆ ವಹಿಸುವ ಸಂಬಂಧ, ಆರೋಪಿ ನೌಕರರನ್ನು ಅಂಕೋಲಾ ಪುರಸಭೆಯಲ್ಲಿ ಮುಂದುವರೆಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಿಸಿ, ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅಗತ್ಯತೆಗೆ ಅನುಸಾರವಾಗಿ  ಅಕ್ಷತಾ ಎಚ್ ಅವರನ್ನು ಸ್ವಂತ ವೇತನ ಶ್ರೇಣಿಯ ಮೇಲೆ ಉತ್ತರ ಕನ್ನಡ ಜಿಲ್ಲಾ ನಗರಾಭಿವೃದ್ದಿ ಕೋಶದಲ್ಲಿ ಖಾಲಿ ಇರುವ ವ್ಯವಸ್ಥಾಪಕರ ಹುದ್ದೆಗೆ ಹಾಗೂ ಕಿರಿಯ ಅಭಿಯಂತರಿಗೆ ಕುಮಟಾ ಪುರಸಭೆಯಲ್ಲಿ ಖಾಲಿ ಇರುವ ಕಿರಿಯ ಅಭಿಯಂತರ ಹುದ್ದೆಗೆ ಮುಂದಿನ ಆದೇಶದವರೆಗೆ ಬದಲಾಯಿಸಿ ಆದೇಶಿಸಿದೆ.

ನ್ಯಾಯಾಲಯದ ಮೇಲೆ ಮತ್ತಷ್ಟು ಗೌರವ ಹೆಚ್ಚಿದ್ದು ಹಾಗೂ ಪೌರಾಡಳಿತ ಇಲಾಖೆಯ ಅದೇಶದಿಂದ ನಮಗೆ ಸಂತಸತಂದಿದೆ.  ನಮ್ಮ ಹೋರಾಟ ಕೇವಲ ಭ್ರಷ್ಟಾಚಾರ ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಅಧಿಕಾರಿಗಳ ವಿರುದ್ಧವೇ ಹೊರತು ಜನಪರ ಕೆಲಸಮಾಡುವ ಅಧಿಕಾರಿಗಳ ವಿರುದ್ಧ ಅಲ್ಲ,ಹಾಗೆಯೇ ಈ ಹೋರಾಟದಲ್ಲಿ ವೈಯಕ್ತಿಕ ಹಿತಾಸಕ್ತಿಯಾಗಲಿ,ಯಾವುದೇ ದುರುದ್ದೇಶಗಳಾಗಲಿ ಇಲ್ಲ. ಮುಂದಿನ ದಿನಗಳಲ್ಲಿ ಅಂಕೋಲಾ ಪುರಸಭೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕಾರ್ಯ ಭರದಿಂದ ಸಾಗಲಿದೆ, ಪಕ್ಷಾತೀತವಾಗಿ ನಮ್ಮ ಜನಪ್ರತಿನಿಧಿಗಳು ನನ್ನೊಂದಿಗೆ ಕೈಜೋಡಿಸಿದ್ದಾರೆ,ಯಾರೇ ಅಧಿಕಾರಿಗಳು ಬಂದರು ತಾಲೂಕಿನ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದರೆ ಸಾಕು ಎಂದು ಪುರಸಭೆ ಅಧಕ್ಷ  ಸೂರಜ್ ನಾಯ್ಕ ಪ್ರತಿಕ್ರಿಯೆ ನೀಡಿದರು.

ಕಳೆದ ಒಂದೂವರೆ ವರ್ಷಗಳಿಂದ ಗೊಂದಲದ ಗೂಡಾಗಿದ್ದ ಅಂಕೋಲಾ ಪುರಸಭೆ ಅಧಿಕಾರಿಗಳ ದರ್ಪ ಹೀಗೆ ಈ ಇನ್ನಿತರ ವಿಷಯಗಳಿಂದ ಹಾರಾಟ-ಹೋರಾಟಕ್ಕೆ ಸಾಕ್ಷಿಯಾಗಿತ್ತು,ಈ ಗೊಂದಲಕ್ಕೆ ತೆರೆಬಿದ್ದಿದ್ದು, ವಾತಾವರಣವನ್ನು ತಿಳಿಯಾಗಿಸಿದೆ. ಹಾಗೆಯೇ ಬುರುಡೆ ಬಾಷಣ ಬಿಗಿಯುತ್ತ ಭ್ರಷ್ಟ ಅಧಿಕಾರಿಗಳ ಪೋಷಿಸುತ್ತಿದ್ದವರ ಕೈ-ಬಾಯಿಯಂತೂ ಕಟ್ಟಿಹಾಕಿದಂತಾಗಿದೆ ಎನ್ನಲಾಗಿದೆ.

ಮುಖ್ಯಾಧಿಕಾರಿಯಾಗಿ ಯೇಸು ಬೆಂಗಳೂರು ನೇಮಕ!


ಪುರಸಭೆ ಮುಖ್ಯಾಧಿಕಾರಿ ಅಕ್ಷತಾ ಎಚ್ ವರ್ಗಾವಣೆ ಆದೇಶ  ಬರುತ್ತಿದ್ದಂತೆಯೇ ಹೊನ್ನಾವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿದ್ದ ಯೇಸು ಸುಬ್ಬಣ್ಣ ಬೆಂಗಳೂರು ಅವರನ್ನು ಪ್ರಬಾರಿ ಮುಖ್ಯಾಧಿಕಾರಿಯಾಗಿ ನೇಮಿಸಲಾಗಿದ್ದು,ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *