Spread the love

​​ಭಟ್ಕಳ: ​ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳನ್ನು ಬಳಸಿಕೊಂಡು ‘ಶ್ರೀ ಮುರುಡೇಶ್ವರ ದೇವಸ್ಥಾನ ಅದೃಷ್ಟ ಡ್ರಾ’ ಎಂಬ ಹೆಸರಿನಲ್ಲಿ ನಕಲಿ ಲಾಟರಿ ಟಿಕೆಟ್ ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಭಾರಿ ಜಾಲವೊಂದನ್ನು ಮುರ್ಡೇಶ್ವರ ಪೊಲೀಸರು ಭೇದಿಸಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬ ಮುರ್ಡೇಶ್ವರ ದೇವಸ್ಥಾನದ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು, ಆಕರ್ಷಕ ಪಾಂಪ್ಲೆಟ್ ತಯಾರಿಸಿ ಜನರಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಹಣ ದೋಚುತ್ತಿದ್ದ. ಈ ಬಗ್ಗೆ ಮಾಹಿತಿ ಅರಿತ ಮುರ್ಡೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಮ್ಯಾನೇಜರ್ ಮಂಜುನಾಥ ಮದನ ಶೆಟ್ಟಿ (73) ಅವರು 2025ರ ಆಗಸ್ಟ್ 6ರಂದು ಮುರ್ಡೇಶ್ವರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಬಿಎನ್‌ಎಸ್-2023 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

​ಒಂದು ವರ್ಷದ ಸತತ ಕಾರ್ಯಾಚರಣೆ ಮತ್ತು ಆರೋಪಿ ಬಂಧನ

​ಪ್ರಕರಣದ ಗಂಭೀರತೆಯನ್ನು ಅರಿತ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಈ ಖದೀಮ ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಬೀದರ್ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಮಾಹಿತಿ ಕಲೆಹಾಕಲಾಗುತ್ತಿತ್ತು.

ಅಂತಿಮವಾಗಿ ನಿಖರವಾದ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಗುರುವಾರ (ಜುಲೈ 16) ಕಾರ್ಯಾಚರಣೆ ನಡೆಸಿದ ಪೊಲೀಸರು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಲಖನಗಾಂವ ಮೂಲದ ನರಸಿಂಗ್ ವೆಂಕಟರಾವ್ ತಗರಖೇಡೆ (32) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೋಟೆಲ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಈತನನ್ನು ಬಂಧಿಸಿ, ಸೂಕ್ತ ರಿಮಾಂಡ್‌ನೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

​ತನಿಖಾ ತಂಡದ ಬೆನ್ನುತಟ್ಟಿದ ಹಿರಿಯ ಅಧಿಕಾರಿಗಳು

​ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎನ್.ಎಮ್. ಹಾಗೂ ಹೆಚ್ಚುವರಿ ಎಸ್ಪಿ ಜಿ. ಕೃಷ್ಣಮೂರ್ತಿ ಅವರ ನೇರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಭಟ್ಕಳ ಉಪ ವಿಭಾಗದ ಡಿವೈಎಸ್ಪಿ ಬಿ. ಗಿರೀಶ್ ಹಾಗೂ ಮುರ್ಡೇಶ್ವರ ವೃತ್ತ ನಿರೀಕ್ಷಕ (CPI) ಜಗದೀಶ್ ಹಂಚನಾಳ ಅವರ ನೇತೃತ್ವದಲ್ಲಿ, ಪಿಎಸ್ಐಗಳಾದ ಹಣಮಂತ ಬಿರಾದಾರ, ಲೋಕನಾಥ ರಾಥೋಡ್ ಹಾಗೂ ಸಿಬ್ಬಂದಿಗಳಾದ ಮಂಜುನಾಥ ಲಕ್ಕಾಪುರ, ಬಿಲಾಲಹುದ ಸಿದ್ದಾಪೂರ, ವಿಜಯ ನಾಯ್ಕ ಮತ್ತು ಸಿದ್ದಪ್ಪ ಕಾಂಬಳೆ ಅವರು ಈ ಕ್ಲಿಷ್ಟಕರ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ವಂಚಕನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ಮುರ್ಡೇಶ್ವರ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *