Spread the love

ಕಾರವಾರ: ಕಳೆದ ನಾಲ್ಕು ವರ್ಷಗಳಿಂದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೇ, ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ವಂಚನೆ ಆರೋಪಿಯೊಬ್ಬನನ್ನು ಕೊನೆಗೂ ಬಂಧಿಸುವಲ್ಲಿ ಕಾರವಾರ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಅಂಕೋಲಾ ತಾಲೂಕಿನ ಅಲಗೇರಿ ಮೂಲದ ವಿಕ್ರಂ ಎನ್. ಪಂತ ಎಂದು ಗುರುತಿಸಲಾಗಿದೆ.

ಈತನ ವಿರುದ್ಧ 158/2022ನೇ ಪ್ರಕರಣದಲ್ಲಿ ಹಣಕಾಸು ವಂಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಆರೋಪಿ ನಿರಂತರವಾಗಿ ನ್ಯಾಯಾಲಯದ ಕಲಾಪಗಳಿಗೆ ಗೈರಾಗುತ್ತಿದ್ದ ಹಿನ್ನೆಲೆಯಲ್ಲಿ, ಕಾರವಾರದ ಮಾನ್ಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ (CJM) ನ್ಯಾಯಾಲಯವು ಈತನ ವಿರುದ್ಧ ಕಠಿಣ ಕ್ರಮ ಕೈಗೊಂಡಿತ್ತು.

ಆರೋಪಿಯ ಬಂಧನಕ್ಕಾಗಿ ಬರೋಬ್ಬರಿ 4 ನಾನ್-ಬೈಲಬಲ್ ವಾರಂಟ್ (NBW), 5 ಪ್ರೊಕ್ಲಮೇಷನ್ ವಾರಂಟ್ ಹಾಗೂ 1 ಅಟ್ಯಾಚ್ಮೆಂಟ್ (ಆಸ್ತಿ ಜಪ್ತಿ) ಆದೇಶವನ್ನು ನ್ಯಾಯಾಲಯ ಹೊರಡಿಸಿತ್ತು.

ಸತತ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೂ ಹಾಜರಾಗದೆ, ಪೊಲೀಸರ ಕೈಗೂ ಸಿಗದೆ ತಲೆಮರೆಸಿಕೊಂಡಿದ್ದ ಈತನ ಬಗ್ಗೆ ಕಾರವಾರ ನಗರ ಪೊಲೀಸರು ಇತ್ತೀಚೆಗೆ ಖಚಿತ ಮಾಹಿತಿ ಕಲೆಹಾಕಿದ್ದರು. ಈ ಖಚಿತ ಮಾಹಿತಿಯ ಮೇರೆಗೆ ಏಪ್ರಿಲ್ 8 ರಂದು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಬಳಿಕ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಕಾರವಾರ ನಗರ ಪೊಲೀಸ್ ಠಾಣೆಯ ಸಿಪಿಸಿ-696 ಗುರು ನಾಯಕ್ ಅವರ ಕಾರ್ಯಕ್ಷಮತೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *