7 ಲಕ್ಷ ಜನರಿಗೆ ಉಚಿತ ಊಟ ನೀಡಿರುವುದು ಮೆಚ್ಚುವಂತಹ ಕಾರ್ಯ- ಶಿವಾನಂದ ದೊಡ್ಮಣಿ

Spread the love

ಕಾರವಾರ: 7 ಲಕ್ಷ ಜನರಿಗೆ ಈ ವರೆಗೆ ಉಚಿತ ಊಟವನ್ನ ಹಾಕುವ ಕೆಲಸ ಮಾಡಿರುವ ಮದರ್ ತೆರೇಸಾ ಸಂಸ್ಥೆಯ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ಮೆಡಿಕಲ್ ಕಾಲೇಜಿನ ಮಾಜಿ ಡೀನ್ ಶಿವಾನಂದ ದೊಡ್ಮಣಿ ಹೇಳಿದರು.

ನಗರದ ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ಉಚಿತ ಊಟ ವಿತರಣೆ 7 ಲಕ್ಷ ಜನರಿಗೆ ದಾಟಿದ ಹಿನ್ನಲೆಯಲ್ಲಿ ಈ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದ ಮಾಜಿ ಡೀನ್ ಶಿವಾನಂದ ದೊಡ್ಮಣಿಗೆ ಸನ್ಮಾನಿಸಿದರು. ಇದಾದ ನಂತರ ಮಾತನಾಡಿದ ಅವರು ಸಂಸ್ಥೆಯ ಸ್ಯಾಮ್ಸನ್ ಡಿಸೋಜಾ ಅವರ ಕಾರ್ಯಕ್ಕೆ ಶ್ಲಾಘಿಸಿದರು.

ತಾನು ಮೆಡಿಕಲ್ ಕಾಲೇಜು ಡೀನ್ ಆಗಿದ್ದ ವೇಳೆಯಲ್ಲಿ ಸ್ಯಾಮ್ಸನ್ ರೋಗಿಯ ಸಂಭಂದಿಗಳಿಗೆ ಉಚಿತ ಊಟ ನೀಡುವ ಬಗ್ಗೆ ಬಂದು ತನ್ನ ಬಳಿ ಮನವಿ ಮಾಡಿಕೊಂಡಿದ್ದರು. ಈ ರೀತಿ ಸೇವಾ ಕಾರ್ಯ ಮಾಡಲು ಮುಂದಾದ ಸ್ಯಾಮ್ಸನ್ ಅವರಿಗೆ ಆಸ್ಪತ್ರೆ ಆವರಣದಲ್ಲಿಯೇ ಸ್ಥಳವನ್ನ ನೀಡಲಾಯಿತು. ಈ ವರೆಗೆ 7 ಲಕ್ಷ ಜನರಿಗೆ ಊಟ ಹಾಕಿರುವುದು ನಿಜಕ್ಕೂ ದೊಡ್ಡ ಸಾಧನೆ ಎಂದರು.

ತಾನು ಹುಬ್ಭಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲೂ ಉಚಿತ ಊಟ ನೀಡುವವರಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದೆವು. ಆದರೆ ಅವರು ಈ ವರೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀಡಿಲ್ಲ. ಆದರೆ ಕಾರವಾರದಲ್ಲಿ ಉಚಿತ ಊಟ ಗುಣಮಟ್ಟದ್ದಾಗಿರುವುದರಿಂದ ಎಲ್ಲರೂ ಪ್ರೀತಿಯಿಂದಲೇ ಬಂದು ಆಹಾರ ಸೇವಿಸಿ ಹೋಗುತ್ತಿರುವುದರಿಂದ 7 ಲಕ್ಷ ಜನರಿಗೆ ಉಚಿತ ಊಟ ನೀಡಲು ಸಹಾಯವಾಗಿದೆ ಎಂದರು.

ಸ್ಯಾಮ್ಸನ್ ಡಿಸೋಜಾ ಅವರು ನಾನಿರುವ ವೇಳೆಯಲ್ಲಿ ಅವರೇ ಗಂಟೆಯೊಂದನ್ನ ಇಟ್ಟುಕೊಂಡು ಆಸ್ಪತ್ರೆಯಲ್ಲಿ ಸುತ್ತಾಡಿ ಜನರನ್ನ ಕರೆದುಕೊಂಡು ಬಂದು ಊಟ ಹಾಕುತ್ತಿದ್ದರು. ಸೇವೆ ಮಾಡಲು ಅವಕಾಶ ಸಿಕ್ಕಾಗ ಸೇವೆ ಮಾಡಬೇಕು. ನಾವು ಇನ್ನೊಬ್ಬರಿಂದಲೇ ಪಡೆದಿರುತ್ತೇವೆ. ಹಾಗೇ ನಾವು ನಮ್ಮ ಕೈನಲ್ಲಿ ಆದದ್ದನ್ನ ಇನ್ನೊಬ್ಬರಿಗೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಸ್ಯಾಮ್ಸನ್ ಡಿಸೋಜಾ, ಫ್ರಾಂಕಿ ಗುಡಿನೋ, ಜುಲಿಯಸ್ ಡಯಾಸ್, ಸೈಮನ್ ಫರ್ನಾಂಡಿಸ್, ವಿಲ್ಸನ್ ಫರ್ನಾಂಡಿಸ್, ಸ್ಯಾಮ್ಸನ್ ರೋಡ್ರಿಗ್ರಿಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *